ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಹಬೀಬ್ ಅಲಿ ಅಭಿನಂದನೆ
ಉಡುಪಿ: ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಹಬೀಬ್ ಅಲಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಸೆ.18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಧಾರ ಕೈಗೊಂಡಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ತುಳು ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಕರಾವಳಿಯ ಇತಿಹಾಸ, ಸಂಸ್ಕೃತಿ, ಪರಂಪರೆ, ಜನಪದ ಕಲೆ, ಸಾಹಿತ್ಯ, ಆಚರಣೆಗಳು ಹಾಗೂ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಇಂತಹ ಶ್ರೀಮಂತ ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆತಿರುವುದು ತುಳು ಭಾಷಿಕರ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಹಬೀಬ್ ಅಲಿ ಹೇಳಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ವಿವಿಧ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಕರಾವಳಿಯ ಜನರಿಂದ ವ್ಯಕ್ತವಾಗುತ್ತಿತ್ತು. ಈ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವು ತುಳು ಭಾಷೆಯ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ಭಾಷೆಯ ವರ್ಗಾವಣೆಗೆ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುಳು ಭಾಷೆಯ ಬೇಡಿಕೆ ಬಹುಕಾಲದಿಂದಲೂ ಇದ್ದದ್ದು ಹಾಗೂ ಸರ್ಕಾರವು ಅದನ್ನು ಗೌರವಿಸಿದೆ ಎಂದು ತಿಳಿಸಿರುವುದನ್ನು ಹಬೀಬ್ ಅಲಿ ಉಲ್ಲೇಖಿಸಿದ್ದಾರೆ. ತುಳು ಭಾಷೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಈ ನಿರ್ಧಾರ ಮತ್ತಷ್ಟು ಉತ್ತೇಜನ ನೀಡಲಿದೆ ಎಂದಿದ್ದಾರೆ.
ಈ ನಿರ್ಧಾರದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಆಡಳಿತದಲ್ಲಿ ತುಳು ಭಾಷೆಯ ಬಳಕೆಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯಲ್ಲಿ ಆಡಳಿತಾತ್ಮಕ ಸೇವೆಗಳು, ಅನುವಾದ, ತರಬೇತಿ ಹಾಗೂ ಭಾಷಾ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ತುಳು ಭಾಷೆಯ ಗೌರವವನ್ನು ಹೆಚ್ಚಿಸುವ ಈ ಐತಿಹಾಸಿಕ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಸಚಿವ ಸಂಪುಟದ ಎಲ್ಲ ಸಚಿವರಿಗೆ ಹಬೀಬ್ ಅಲಿ ಹೃತ್ಪೂರ್ವಕ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ.
ಅದೇ ರೀತಿ, ತುಳು ಭಾಷೆಯ ಮಾನ್ಯತೆಗಾಗಿ ದೀರ್ಘಕಾಲದಿಂದ ಹೋರಾಟ ನಡೆಸಿದ ತುಳು ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಕರಾವಳಿಯ ಸಮಸ್ತ ತುಳು ಭಾಷಿಕರಿಗೂ ಅವರು ಅಭಿನಂದನೆ ಸಲ್ಲಿಸಿದ್ದಾರೆ.
“ತುಳು ಭಾಷೆ ನಮ್ಮ ಹೆಮ್ಮೆ, ತುಳು ಸಂಸ್ಕೃತಿ ನಮ್ಮ ಅಸ್ಮಿತೆ” ತುಳು ಭಾಷೆಯ ಅಭಿವೃದ್ಧಿಯೊಂದಿಗೆ ಕನ್ನಡ ಸೇರಿದಂತೆ ಕರ್ನಾಟಕದ ಎಲ್ಲ ಭಾಷೆಗಳಿಗೂ ಗೌರವ ನೀಡುತ್ತಾ ಭಾಷಾ ಸೌಹಾರ್ದತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಮತ್ತಷ್ಟು ಬಲಪಡಿಸುವ ಕರ್ನಾಟಕ ನಿರ್ಮಾಣವಾಗಲಿ. ಈ ಐತಿಹಾಸಿಕ ನಿರ್ಧಾರವು ತುಳು ಭಾಷೆಯ ಅಭಿವೃದ್ಧಿಗೆ ಹೊಸ ಅಧ್ಯಾಯವನ್ನು ಆರಂಭಿಸಿ, ಮುಂದಿನ ಪೀಳಿಗೆಗೆ ಶ್ರೀಮಂತ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಬಲವಾಗಿ ತಲುಪಿಸಲಿ ಎಂದು ಹಬೀಬ್ ಅಲಿ ಆಶಿಸಿದ್ದಾರೆ.
