ಪರವಾನಿಗೆ ಇಲ್ಲದೆ ಪಟಾಕಿ ದಾಸ್ತಾನು: ಸುಳ್ಯದಲ್ಲಿ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಸುಳ್ಯ: ಯಾವುದೇ ಪರವಾನಿಗೆ ಇಲ್ಲದೆ ಮಾರಾಟದ ಉದ್ದೇಶದಿಂದ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಸುಳ್ಯ ತಾಲೂಕಿನ ಮುಪ್ಪೇರಿಯ ಗ್ರಾಮದ ಉರುಂಬಿ ನಿವಾಸಿ ಸುಧಾಕರ ರೈ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಮುರುಗೇಶ್ ಅವರಿಗೆ ಸುಧಾಕರ ರೈ ಅವರ ಮನೆಯ ಬಳಿ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಮನೆಯ ಅಂಗಳದ ಬಳಿ ಪಟಾಕಿ ಬಾಕ್ಸ್ಗಳು ಪತ್ತೆಯಾಗಿವೆ.
ಈ ಬಗ್ಗೆ ಸುಧಾಕರ ರೈ ಅವರನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಮಾರಾಟದ ಉದ್ದೇಶದಿಂದ ಪಟಾಕಿಗಳನ್ನು ತಂದು ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಪರವಾನಿಗೆ ಇಲ್ಲದೆ ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿ ನಿರ್ಲಕ್ಷ್ಯ ವಹಿಸಿರುವ ಆರೋಪದ ಮೇರೆಗೆ ನವೆಂಬರ್ 5, 2026ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 66/2026ರಂತೆ ಬಿಎನ್ಎಸ್ 2023ರ ಕಲಂ 287, 228 ಹಾಗೂ ಸ್ಫೋಟಕ ಕಾಯ್ದೆಯ ಕಲಂ 9(ಬಿ)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
