ಮಣಿಪಾಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಕಿರುಕುಳ, ಬ್ಲ್ಯಾಕ್ ಮೇಲ್ ಆರೋಪದಲ್ಲಿ ಯುವಕನ ಬಂಧನ
ಉಡುಪಿ: ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಗೆ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್ಮೇಲ್ ಮಾಡಿರುವ ಶಂಕೆಯ ಮೇರೆಗೆ 21 ವರ್ಷದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿ ಲೆಸ್ಲಿ ಜೋಸೆಫ್ ಮ್ಯಾಥ್ಯೂ (60) ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಅವರ ಪುತ್ರಿ ಪೌಲಾ ಲೆಸ್ಲಿ ವಾರ್ಜ್ರಿ ಅವರು ಮಣಿಪಾಲದ WGSHA ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದರು.
2025ರ ನವೆಂಬರ್ 7ರ ರಾತ್ರಿ 11.45ರಿಂದ ನವೆಂಬರ್ 8ರ ಬೆಳಗ್ಗೆ 8.40ರ ನಡುವಿನ ಅವಧಿಯಲ್ಲಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಐರಿಸ್ ಪ್ಲಾಜಾ ಕಟ್ಟಡದ 504ನೇ ಕೊಠಡಿಯಲ್ಲಿ ಪೌಲಾ ಲೆಸ್ಲಿ ವಾರ್ಜ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮಣಿಪಾಲ ಠಾಣೆಯಲ್ಲಿ ಯುಡಿಆರ್ ನಂ.45/2025ರಂತೆ ಬಿಎನ್ಎಸ್ ಕಲಂ 194(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಬಳಿಕ ಮೃತೆಯ ಆಪಲ್ ಐಪ್ಯಾಡ್, ಐಫೋನ್, ಡೈರಿ ಹಾಗೂ ಇತರ ಡಿಜಿಟಲ್ ದಾಖಲೆಗಳನ್ನು ಕುಟುಂಬಸ್ಥರ ವಶಕ್ಕೆ ನೀಡಲಾಗಿತ್ತು.
ಈ ದಾಖಲೆಗಳನ್ನು ಪರಿಶೀಲಿಸಿದಾಗ ಸಾಯಿ ಭಿಂಗಾರೆ ಅಲಿಯಾಸ್ ಸಾಯಿ ಪಾಟೀಲ್ ಎಂಬಾತನೊಂದಿಗೆ ಸ್ನ್ಯಾಪ್ಚಾಟ್ ಮೂಲಕ ನಡೆದಿದ್ದ ಸಂವಹನಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೃತೆಗೆ ಆತ್ಮಹತ್ಯೆಗೆ ನಿರಂತರ ಕಿರುಕುಳ ನೀಡಿರುವುದು, ಬಲವಂತ ಮಾಡಿರುವುದು ಅಥವಾ ಬ್ಲ್ಯಾಕ್ಮೇಲ್ ಮಾಡಿರುವ ಸಾಧ್ಯತೆಯ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು.
ಈ ದೂರಿನ ಆಧಾರದ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಸೂಚನೆಯಂತೆ ಪಿಎಸ್ಐ ತಿಮ್ಮೇಶ್ ಬಿ.ಎನ್. ಅವರು ತನಿಖೆ ನಡೆಸಿದ್ದು, ಪ್ರಕರಣದ ಆರೋಪಿ ಸಾಯಿ ಸಂಜಯ್ ಬಿಂಗಾರೆ (21), ಸಂಜಯ್ ಬಿಂಗಾರೆ ಅವರ ಪುತ್ರ, ಅಲೋಕ್ ಸಿಟಿ ಸೈಲಿ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ನಿವಾಸಿ ಎಂಬಾತನನ್ನು ಸೆಪ್ಟೆಂಬರ್ 9, 2026ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
