ಗ್ಯಾರಂಟಿ ಪ್ರಯೋಜನ ಅರ್ಹರಿಗೆ ತಲುಪಲು ಕ್ರಮ ವಹಿಸಿ- ಭರತ್ ಮುಂಡೋಡಿ ಸೂಚನೆ
ಮಂಗಳೂರು: ಅರ್ಹ ಫಲಾನುಭವಿಗಳು ಮಾತ್ರ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜನರ ಸಮಸ್ಯೆಗಳನ್ನು ನಿವಾರಿಸಲು ಎಲ್ಲಾ ಇಲಾಖೆಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಳ್ಯ ವ್ಯಾಪ್ತಿಯಲ್ಲಿ ಸುಮಾರು 7 ವರ್ಷಗಳಿಂದ ವಿದ್ಯುತ್ ಕಳ್ಳತನ ನಡೆಯುತ್ತಿದ್ದು, 1 ವರ್ಷಕ್ಕೆ ಮಾತ್ರ ದಂಡ ವಿಧಿಸಲಾಗಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭರತ್ ಮುಂಡೋಡಿ ಅವರು ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ತನಿಖೆ ಮಾಡಿ ಸೂಕ್ತ ಕ್ರಮವಹಿಸುವಂತೆ ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ಜನವರಿ 24 ರಿಂದ ಫೆಬ್ರವರಿ 20 ರವರೆಗೆ 222 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈವರೆಗೆ 3,80,630 ಫಲಾನುಭವಿಗಳು ನೋಂದಾಯಿಸಿಕೊಂಡಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಎಲ್ಲಾ ಕಾರ್ಡ್ಗಳನ್ನು ಸರ್ವೆ ಮಾಡಿಸುವ ಬಗ್ಗೆ ಕಾರ್ಯ ಆಗಬೇಕೆಂದು ಮುಲ್ಕಿ ತಾಲೂಕು ಮಟ್ಟದ ಗ್ಯಾರಂಟಿ ಅಧ್ಯಕ್ಷರು ತಿಳಿಸಿದಾಗ, ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳ ಸಂಖ್ಯೆ ಸಾಕಷ್ಟಿದ್ದು, ಬೇರೆ ಬೇರೆ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ರೇಶನ್ ಕಾರ್ಡಿನ ಅವಶ್ಯಕತೆ ಇರುತ್ತದೆ. ಆದರೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಕಾರ್ಡ್ ಗಳನ್ನು ನೀಡಿರುವ ನೆಲೆಯಲ್ಲಿ ಹೊಸ ರೇಶನ್ ಕಾರ್ಡ್ಗಳನ್ನು ವಿತರಿಸಲು ಅವಕಾಶವಿರುವುದಿಲ್ಲ. ಹಾಗಾಗಿ, ಕಾರ್ಡ್ಗಳನ್ನು ರಾಜ್ಯದಲ್ಲಿರುವ ಎಲ್ಲಾ ಮಾಡಿ ಸರ್ವೆ ರೇಶನ್ ಅರ್ಹ ಹೊಸ ಫಲಾನುಭವಿಗಳಿಗೆ ರೇಶನ್ ಕಾರ್ಡ್ ವಿತರಿಸಲು ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ನಿರ್ಣಯ ಮಾಡಲಾಯಿತು.
ಎಳತ್ತೂರು 33/11 ಕೆವಿ ಉಪಕೇಂದ್ರವನ್ನು ಚಾಲನೆಗೊಳಿಸುವ ಬಗ್ಗೆ ವಿದ್ಯುತ್ ಪರಿವೀಕ್ಷಣಾಲಯದ ಅನುಮತಿ ದೊರೆಯುವ ಹಂತದಲ್ಲಿದ್ದು, ಚಾಲನೆಗೊಳಿಸಲು ಕೂಡಲೇ ಕ್ರಮಕೈಗೊಳ್ಳಲಾಗುತ್ತದೆ. ಹಳೆಯಂಗಡಿಯಿಂದ ಪಕ್ಷಿಕೆರೆಯಲ್ಲಿ 1 ಕಿ.ಮೀ ರಸ್ತೆ ಅಗಲೀಕರಣ ಮಾಡಿ ಡಾಂಬರು ಮಾಡಲಾಗಿ ರಸ್ತೆಯಲ್ಲಿರುವ ಕಂಬಗಳನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡುವಂತೆ ಮುಲ್ಕಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದಾಗ, ಕಂಬಗಳನ್ನು ಸ್ಥಳಾಂತರಿಸಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ, ಸ್ವಯಂ ನಿರ್ವಹಣೆಯಡಿಯಲ್ಲಿ ಅಂದಾಜುಪಟ್ಟಿ ಮಂಜೂರುಗೊಂಡು ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ 25% ಅಭ್ಯರ್ಥಿಗಳ ನೈಜತೆ ಪರಿಶೀಲನೆ ನಡೆಸಲಾಗಿದ್ದು, ಅದರಂತೆ ಸದ್ಯ ತಾಲೂಕುಗಳ ಮಟ್ಟದಲ್ಲಿ 25% ಅಭ್ಯರ್ಥಿಗಳ ನೈಜತಾ ಪರಿಶೀಲನೆ ಪಟ್ಟಿಯು ಸ್ವೀಕೃತವಾಗಿದ್ದು, ಆಯುಕ್ತಾಲಯಕ್ಕೆ ಸಲ್ಲಿಸಲು ಕ್ರಮ ವಹಿಸಲಾಗಿರುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಜೋಕಿಂ ಡಿಸೋಜಾ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಸುರೇಂದ್ರ ಕಂಬಳಿ, ಎಸ್ ರಫೀಕ್, ಸುಧೀರ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
