ಜಮೀರ್ ಅಹ್ಮದ್ ಖಾನ್ ಅವರ ನಿರ್ಧಾರವನ್ನು ಟೀಕಿಸುವ ನೈತಿಕತೆ ಬಿಜೆಪಿಗೆ ಇಲ್ಲ – ಸಚಿವ ರಿಜ್ವಾನ್ ಅರ್ಷದ್
ಉಡುಪಿ: ಧ್ವಜಾರೋಹಣ ಮಾಡದಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿರ್ಧಾರವನ್ನು ಬಿಜೆಪಿ ಟೀಕಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, ಈ ವಿಚಾರದಲ್ಲಿ ಬಿಜೆಪಿಗೆ ಟೀಕಿಸುವ ನೈತಿಕತೆ ಇಲ್ಲ ಎಂದು ಹೇಳಿದರು.
ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “52 ವರ್ಷಗಳ ಕಾಲ ನಾಗಪುರದಲ್ಲಿರುವ ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ ಮಾಡಿಲ್ಲ. ಹೀಗಿರುವಾಗ ನಮಗೆ ನೈತಿಕ ಬೋಧನೆ ಮಾಡುವ ಅಗತ್ಯವಿಲ್ಲ” ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಧ್ವಜ ಎತ್ತಿ ಹೋರಾಟ ನಡೆಸಿದೆ. ಅದೇ ರಕ್ತ ನಮ್ಮ ದೇಹದಲ್ಲಿಯೂ ಹರಿಯುತ್ತಿದೆ ಎಂದ ಅವರು, ಜಮೀರ್ ಅಹ್ಮದ್ ಅವರು ಉಸ್ತುವಾರಿ ಸಚಿವರ ಜವಾಬ್ದಾರಿ ಬೇಡ ಎಂದು ಹೇಳಿರುವ ಹಿನ್ನೆಲೆಯಲ್ಲಿ ಧ್ವಜಾರೋಹಣದ ಜವಾಬ್ದಾರಿಯನ್ನೂ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ತಮ್ಮ ಮೇಲೆ ಬೇರೆ ಜವಾಬ್ದಾರಿಗಳು ಹೆಚ್ಚಾಗಿವೆ ಎಂದು ಅವರು ಹೇಳಿದ್ದಾರೆ ಎಂದರು.
“ನಾನು ಪ್ರವಾಸದಲ್ಲಿದ್ದ ಕಾರಣ ಈ ಕುರಿತು ಹೆಚ್ಚಿನ ಮಾಹಿತಿ ನನಗೆ ತಿಳಿದಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದರು.
ಶಾಲಾ ಮೈದಾನ ಹಾಗೂ ಮುಜರಾಯಿ ದೇವಸ್ಥಾನಗಳ ಆವರಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಬಿಜೆಪಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ರಿಜ್ವಾನ್ ಅರ್ಷದ್, ಸರ್ಕಾರ ಎಲ್ಲಿಯೂ ಆರ್ಎಸ್ಎಸ್ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು.
“ಆರ್ಎಸ್ಎಸ್ ಅನ್ನು ಏಕೆ ತಮ್ಮ ಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹಲವಾರು ಸಂಘಟನೆಗಳು ನೋಂದಣಿಯಾಗಿಲ್ಲ. ಆ ಸಂಘಟನೆಗಳು ಯಾವುವು ಎಂಬುದೂ ಸ್ಪಷ್ಟವಾಗಿಲ್ಲ. ನಮ್ಮ ಪಾರ್ಕ್ಗಳು, ಶಾಲಾ ಮೈದಾನಗಳನ್ನು ಹಲವು ಸಂಘಟನೆಗಳು ಬಳಸುತ್ತಿವೆ. ಇದರಿಂದ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ” ಎಂದರು.
ಸಾರ್ವಜನಿಕ ಸ್ಥಳಗಳನ್ನು ಯಾರು ಬಳಸುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಇರಬೇಕು. ನೋಂದಾಯಿತ ಸಂಘಟನೆಗಳು ನಿಯಮಾನುಸಾರ ಬಳಸಿದರೆ ಸಮಸ್ಯೆಯಿಲ್ಲ. ಆದರೆ ಅನಧಿಕೃತ ಸಂಘಟನೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಚಿವರು ಹೇಳಿದರು.
ಬಿಪಿಎಲ್ ಪಡಿತರ ಚೀಟಿಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ 7.59 ಲಕ್ಷ ಕಾರ್ಡ್ಗಳನ್ನು ರದ್ದುಪಡಿಸುವ ಪ್ರಕ್ರಿಯೆ ಆರಂಭವಾಗಿತ್ತು. ಈ ಪೈಕಿ ಸುಮಾರು ನಾಲ್ಕು ಲಕ್ಷ ಕಾರ್ಡ್ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಉಳಿದ ಸುಮಾರು 3.5 ಲಕ್ಷ ಕಾರ್ಡ್ಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದರು.
“ಸೂಕ್ತ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಸದ್ಯ ಯಾವುದೇ ಕಾರ್ಡ್ಗಳನ್ನು ರದ್ದುಪಡಿಸದಂತೆ ಸೂಚಿಸಿದ್ದೇನೆ” ಎಂದು ಹೇಳಿದರು.
ಪಡಿತರ ಚೀಟಿಗಳಿಗೆ KYC ಮಾಡಿಸಿ ಸುಮಾರು ಐದು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಮತ್ತೊಮ್ಮೆ KYC ಮಾಡಿಸಬೇಕಾಗಿದೆ. ರಾಜ್ಯದಲ್ಲಿ ಸುಮಾರು 2.59 ಕೋಟಿ ಕಾರ್ಡ್ಗಳಿಗೆ ಮರು KYC ಪ್ರಕ್ರಿಯೆ ನಡೆಸಬೇಕಿದೆ ಎಂದು ಸಚಿವರು ತಿಳಿಸಿದರು.
ಮರಣ ಹೊಂದಿರುವವರು, ಬಡತನ ರೇಖೆಗಿಂತ ಮೇಲೇರಿರುವವರು ಅಥವಾ ಕಾರ್ಡ್ನ ಅಗತ್ಯವಿಲ್ಲದಿರುವವರ ಮಾಹಿತಿಯೂ ಈ ಪ್ರಕ್ರಿಯೆಯಿಂದ ಲಭ್ಯವಾಗಲಿದೆ. ಸೆಪ್ಟೆಂಬರ್ 30ರೊಳಗೆ KYC ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಹೊಸ APL ಕಾರ್ಡ್ಗಳ ವಿತರಣೆ ಕುರಿತು ಸರ್ಕಾರಿ ಮಟ್ಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತಾವು ಇಲಾಖೆಯ ಜವಾಬ್ದಾರಿ ವಹಿಸಿಕೊಂಡು ಕೇವಲ ಒಂದು ದಿನವಾಗಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ರಿಜ್ವಾನ್ ಅರ್ಷದ್ ಹೇಳಿದರು.
ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿಗೆ ಇರುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಖಂಡಿತವಾಗಿಯೂ ಗಮನ ಹರಿಸುವುದಾಗಿ ಹೇಳಿದರು.
“ಆಯಾ ಪ್ರದೇಶಗಳಿಗೆ ಅನುಗುಣವಾಗಿ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕರಾವಳಿ ಭಾಗದಲ್ಲಿಯೂ ಕುಚ್ಚಲಕ್ಕಿ ನೀಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂದು ರಿಜ್ವಾನ್ ಅರ್ಷದ್ ಭರವಸೆ ನೀಡಿದರು.
