ಕಂಠಪೂರ್ತಿ ಭ್ರಷ್ಠಾಚಾರದಲ್ಲಿ ಮುಳುಗಿದ ಬಿಜೆಪಿಯವರದ್ದು ಪೇಯ್ಡ್ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್
ಮಂಗಳೂರು: ಬಿಜೆಪಿ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್ದಾರೆ ಎಂದು ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಳ್ಳಾರಿಗೆ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯೊಳಗಿನ ನಾಯಕತ್ವದ ಗೊಂದಲದಿಂದಾಗಿ ಹಲವು ನಾಯಕರು ಪಾದಯಾತ್ರೆಯಿಂದ ದೂರ ಉಳಿದಿದ್ದಾರೆ. ಇದೀಗ ನಾಯಕತ್ವವನ್ನು ಪ್ರತಿಪಾದಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಭ್ರಷ್ಟಾಚಾರದ ಕುರಿತು ಚರ್ಚಿಸಲು ಬಿಜೆಪಿಯವರಿಗೆ ಅವಕಾಶವಿತ್ತು. ಆದರೆ ಅಲ್ಲಿ ಚರ್ಚಿಸದೆ ಇದೀಗ ಪಾದಯಾತ್ರೆ ನಡೆಸುತ್ತಿರುವುದು ಏಕೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
“ಇವರೇನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಇವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿರುವವರು,” ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಇದೀಗ ಸಂಪೂರ್ಣ ನಿರುದ್ಯೋಗ ಉಂಟಾಗಿದ್ದು, ನಾಯಕತ್ವವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ‘ಮರಿ ಯಡಿಯೂರಪ್ಪ’ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
“ಬಿಜೆಪಿಯವರದ್ದು ಪೇಯ್ಡ್ ಪಾದಯಾತ್ರೆ. ಇದು ಜನರ ಮನ್ನಣೆ ಪಡೆದ ಪಾದಯಾತ್ರೆಯಲ್ಲ,” ಎಂದು ಅವರು ಟೀಕಿಸಿದರು. ಅಲ್ಲದೆ, ಚೆಕ್ ಮೂಲಕ ಲಂಚ ಪಡೆದ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧವೂ ಹರಿಹಾಯ್ದರು.
