ಕೇಂದ್ರ ಬಜೆಟ್ ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ – ಪ್ರಸಾದ್ ರಾಜ್ ಕಾಂಚನ್
ಉಡುಪಿ: ವಿತ್ತಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಜ್ಯ ಹಾಗೂ ಕರಾವಳಿ ಜಿಲ್ಲೆಗಳ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಬರಲಿರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಹಲವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ ಹೊರತು ಪಡಿಸಿದರೆ ಕರಾವಳಿ ಭಾಗಕ್ಕೆ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ. ಕರಾವಳಿ ಭಾಗದಲ್ಲಿ ರೈಲ್ವೇ ಯೋಜನೆಗಳಿಗೆ ವಿಶೇಷ ಒತ್ತು ನೀಡಬೇಕಾಗಿತ್ತು.ಹೆಚ್ಚುವರಿ ರೈಲುಗಳು ಹಾಗೂ ದ್ವಿಪಥ ಯೋಜನೆಗಳನ್ನು ವಿಸ್ತರಿಸಬೇಕಾಗಿತ್ತು.ಈ ವಿಚಾರದಲ್ಲಿ ಕರಾವಳಿಗೆ ವಿತ್ತ ಸಚಿವೆ ಯಾವುದೇ ಯೋಜನೆಯನ್ನು ನೀಡಿರುವುದು ನಿಜಕ್ಕೂ ನೋವುಂಟು ಮಾಡಿದೆ.
ವಿಶೇಷ ವಾಗಿ ಮೀನುಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದ್ದು ಕರಾವಳಿಯ ಬಂದರುಗಳನ್ನು ಅಭಿವೃದ್ದಿ ಪಡಿಸಲು ಒತ್ತು ನೀಡದಿರುವುದು ಕಂಡು ಬಂದಿದೆ.
ಬಹುಶಃ ಕರಾವಳಿ ಭಾಗದ ಸಂಸದರು ಗಳು ಕರಾವಳಿ ಭಾಗಕ್ಕೆ ಅಗತ್ಯ ಇರುವ ಬೇಡಿಕೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲವಾಗಿರುವ ಕಾರಣದಿಂದ ಕರಾವಳಿಗೆ ಅನ್ಯಾಯವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು.ಇದೊಂದು ನಿರಾಶದಾಯಕ ಮತ್ತು ಶ್ರೀಮಂತರ ಬಜೆಟ್ ಎಂದು ಬಣ್ಣಿಸಿದ್ದಾರೆ.
