ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಕೇಂದ್ರ ಸರ್ಕಾರದ ವರ್ತನೆ ಖಂಡನೀಯ: ರವಿರಾಜ್ ರಾವ್
ಉಡುಪಿ: ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್ನಲ್ಲಿ 20 ದಿನಗಳಿಗೂ ಹೆಚ್ಚು ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು, ಬಳಿಕ ಆಯೋಜಿಸಿದ್ದ “ಸಂಸತ್ ಚಲೋ” ಕಾರ್ಯಕ್ರಮದ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿರುವುದನ್ನು ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವಿರಾಜ್ ರಾವ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾವಿರಾರು ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ಮೇಲೆ ಬಲಪ್ರಯೋಗ ನಡೆಸಿರುವುದು ವಿದ್ಯಾರ್ಥಿಗಳ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಇದು ಖಂಡನೀಯ ಮತ್ತು ಅಕ್ಷಮ್ಯ ಕೃತ್ಯವಾಗಿದೆ.
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರು ವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳ ಧ್ವನಿಯನ್ನು ಬಲಪ್ರಯೋಗದ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ.
ಈ ಹಿಂದೆ ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ಲಾಠಿ ಚಾರ್ಜ್ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡು, ನಂತರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಮತ್ತೆ ವಿದ್ಯಾರ್ಥಿಗಳ ಮೇಲೆಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.
ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಬಲಪ್ರಯೋಗ ನಡೆಸುವುದು ಸರಿಯಲ್ಲ. ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಹಾನಿ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಸರ್ಕಾರದ ಮೇಲಿದೆ. ಸರ್ಕಾರವು ತಕ್ಷಣ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
