ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಜಿಲ್ಲೆಯ ಅಗ್ನಿಶಾಮಕದಳದ ವೈಫಲ್ಯವೇ ಸಾಕ್ಷಿ : ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ಜಿಲ್ಲೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಯ ಧೋರಣೆಯ ಬಗ್ಗೆ ಜಿಲ್ಲೆಯ ಅಗ್ನಿಶಾಮಕ ದಳದ ತುರ್ತು ಸೇವಾ ವೈಫಲ್ಯವೇ ಸಾಕ್ಷಿ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಉಡುಪಿ ನಗರದ ಹೃದಯ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕೇವಲ 2 ಕಿಲೋಮೀಟರ್ ದೂರದ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು 45 ನಿಮಿಷ ತೆಗೆದುಕೊಳ್ಳುವ ಮೂಲಕ ಅಗ್ನಿಶಾಮಕ ದಳದ ತುರ್ತು ಕಾರ್ಯಚರಣೆಯ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಉಡುಪಿ ನಗರದ ಅಗ್ನಿಶಾಮಕ ದಳಕ್ಕೆ ಹೆಚ್ಚುವರಿ ವಾಹನ ಹಾಗೂ ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಈವರೆಗೂ ಪೂರಕವಾಗಿ ಸ್ಪಂದಿಸಿಲ್ಲ. ಉಡುಪಿ ಜಿಲ್ಲೆಯಾಗಿ 28 ವರ್ಷಗಳು ಕಳೆದರೂ ತುರ್ತು ಕಾರ್ಯಚರಣೆಯ ಸಂದರ್ಭದಲ್ಲಿ ನೆರೆಯ ಜಿಲ್ಲೆಯನ್ನು ಅವಲಂಬಿಸುವ ಸನ್ನಿವೇಶ ನಿರ್ಮಾಣವಾಗಿರುವುದು ದುರದೃಷ್ಟಕರ.
ಮಣಿಪಾಲ ಹಾಗೂ ಬ್ರಹ್ಮಾವರ ಭಾಗಕ್ಕೆ ಅಗ್ನಿಶಾಮಕ ದಳದ ಬೇಡಿಕೆಗೆ ಇದೀಗ ಮಂಜೂರು ನೀಡಿದ್ದರೂ, ಬ್ರಹ್ಮಾವರ ಅಗ್ನಿಶಾಮಕದಳ ಘಟಕಕ್ಕೆ ಇನ್ನೂ ಅನುದಾನ ಮಂಜೂರಾತಿ ಆಗಿಲ್ಲ. ಅಗ್ನಿಶಾಮಕದಳದಲ್ಲಿ 15 ವರ್ಷ ಹಳೆಯದಾದ ವಾಹನಗಳು ಸೇವೆಗೆ ಲಭ್ಯವಾಗದ ಕಾರಣ ಹೊಸ ವಾಹನಗಳ ಮಂಜೂರಾತಿಗೂ ಮೀನ ಮೇಷ ಎಣಿಸುತ್ತಿದೆ.
ರಾಜ್ಯ ಸರ್ಕಾರ ಮೊನ್ನೆ ಉಡುಪಿಯಲ್ಲಿ ಅಗ್ನಿ ಅವಘಡದಿಂದ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಅಂಗಡಿ ಮಾಲೀಕರಿಗೆ ತಕ್ಷಣ ಗರಿಷ್ಠ ಪರಿಹಾರ ಮಾಡಬೇಕು.
ಮೀನುಗಾರಿಕೆ ,ಆರೋಗ್ಯ ,ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಉಡುಪಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಗ್ನಿಶಾಮಕ ದಳ ಅತ್ಯಂತ ಅಗತ್ಯವಾಗಿದ್ದು, ರಾಜ್ಯ ಸರ್ಕಾರ ಇನ್ನಾದರೂ ಉಡುಪಿ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಕೇವಲ ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಳ್ಳದೆ ಅಗ್ನಿಶಾಮಕ ದಳದಂತಹ ಅತ್ಯಗತ್ಯ ತುರ್ತು ಸೇವೆಗಳ ಬಗ್ಗೆ ವಿಶೇಷ ಆದ್ಯತೆ ನೀಡಿ ಸಾರ್ವಜನಿಕರ ಜೀವ ಹಾಗೂ ಆಸ್ತಿ ಪಾಸ್ತಿ ರಕ್ಷಣೆಗೆ ಮುಂದಾಗಬೇಕಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
