ಆಡು ಮುಟ್ಟದ ಸೊಪ್ಪಿಲ್ಲ, ಕೇರಳಿಗರು ಮೆಟ್ಟದ ಮಣ್ಣಿಲ್ಲ: ಯಶ್ಪಾಲ್ ಸುವರ್ಣ
ಉಡುಪಿ: ಕೇರಳಿಗರು ಬುದ್ಧಿವಂತರು, ಸಂಸ್ಕಾರವಂತರು ಹಾಗೂ ವಿದ್ಯಾವಂತರಾಗಿದ್ದು, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಭಾಷೆಯ ಮೇಲಿನ ಅಭಿಮಾನವನ್ನು ಉಳಿಸಿಕೊಂಡಿರುತ್ತಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
“ಆಡು ಮುಟ್ಟದ ಸೊಪ್ಪಿಲ್ಲ, ಕೇರಳಿಗರು ಮೆಟ್ಟದ ಮಣ್ಣಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕೇರಳಿಗರು ಯಾವುದೇ ಕೆಲಸಕ್ಕೂ ಸೈ ಎನಿಸಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.
ಉಡುಪಿ ಚಿಟ್ಪಾಡಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ (KCSC) ವತಿಯಿಂದ ಆಯೋಜಿಸಿದ್ದ ಓಣಂ ಆಚರಣೆ ಹಾಗೂ 32ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೇರಳ ಮತ್ತು ತುಳುನಾಡಿನ ನಡುವೆ ಅವಿನಾಭಾವ ಸಂಬಂಧವಿದೆ. ವ್ಯವಹಾರಿಕವಾಗಿಯೂ ಕೇರಳದ ಕರಾವಳಿಯಿಂದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡದವರೆಗಿನ ಕರಾವಳಿ ಪ್ರದೇಶಗಳು ಸೌಹಾರ್ದ ಸಂಬಂಧವನ್ನು ಹೊಂದಿವೆ. ಮೂಲತಃ ಕೇರಳಿಗರಾಗಿದ್ದರೂ ತುಳುನಾಡಿನ ಸಂಸ್ಕೃತಿಯನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದು ಯಶ್ಪಾಲ್ ಸುವರ್ಣ ಹೇಳಿದರು.
ನಟ, ಲೇಖಕ ಹಾಗೂ ಗಾಯಕ ರಾಜೇಶ್ ಹೆಬ್ಬಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. KCSC ಅಧ್ಯಕ್ಷ ರಾಜನ್ ಫಿಲಿಪ್ಸ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ನಾರ್ಕಾ ಡೆವಲಪ್‌ಮೆಂಟ್ ಆಫೀಸರ್ ಜಯಪ್ರಕಾಶ್ ಎಂ.ಕೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಾಧಕರಿಗೆ KCSC ಪಂಚರತ್ನ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ವಿನೋದ್ ವಿ. ಥಾಮಸ್ (ಶಿಕ್ಷಣ), ಡಾ. ರಾಜೇಶ್ ನಾಯರ್ (ಆರೋಗ್ಯ), ಎಂ.ಎಲ್. ಜೋಸೆಫ್ (ಕೃಷಿ), ಲಿಯಾಖತ್ ಅಲಿ (ಕಲೆ ಮತ್ತು ಸಂಸ್ಕೃತಿ) ಹಾಗೂ ಕುಮಾರಿ ಸಾನ್ವಿ ರಾಜೇಶ್ (ನೃತ್ಯ) ಅವರಿಗೆ KCSC ಪಂಚರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
KCSC ಸದಸ್ಯರ ಕುಟುಂಬಗಳ 11 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ತಲಾ ₹5,000 ನಗದು ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಉಡುಪಿ ಮಿತ್ರಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು.
ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳು ನಡೆದವು. ಮಕ್ಕಳು ಸೇರಿದಂತೆ KCSC ಕುಟುಂಬಗಳ ಸುಮಾರು 80 ಮಂದಿ ವಿವಿಧ ನೃತ್ಯ, ಸಂಗೀತ ಮತ್ತು ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.
ಕೇರಳದ ವಿಶಿಷ್ಟ ಅತ್ತಪ್ಪೂಕಳಂ, ಸಾಂಪ್ರದಾಯಿಕ ಸ್ಪರ್ಧೆಗಳು, ಓಣಂ ಸದ್ಯ ಹಾಗೂ KCSC ಓಣಂ ಗೀತೆ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಯುವ ಹಾಗೂ ಸೂಪರ್ ಸೆವೆಂಟಿ ಘಟಕ ಉದ್ಘಾಟನೆ
ಕಾರ್ಯಕ್ರಮದಲ್ಲಿ KCSCಯ ಯುವ ಘಟಕ ಹಾಗೂ ಸೂಪರ್ ಸೆವೆಂಟಿ ಘಟಕವನ್ನು ಉದ್ಘಾಟಿಸಲಾಯಿತು. ಕೇರಳದ ಕಣ್ಣೂರಿನ ಕಲಾಭವನ್ ರಾಜೇಶ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
KCSC ಮಾಜಿ ಅಧ್ಯಕ್ಷ ಸುಗುಣ ಕುಮಾರ್, ಕೋಶಾಧಿಕಾರಿ ಶಾಜಿ ವಿ. ಕರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಚಟುವಟಿಕೆಗಳು ಹಾಗೂ ಸಾಧನೆಗಳನ್ನು ಒಳಗೊಂಡ ಕಾರ್ಯ ವರದಿಯನ್ನು ಕಾರ್ಯದರ್ಶಿ ಬಿನೇಶ್ ವಿ.ಸಿ. ಮಂಡಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಬಿನಿಲ್ ವಿ. ಸ್ವಾಗತಿಸಿದರು. ಓಣಂ ಸಮಿತಿ ಅಧ್ಯಕ್ಷ ಶಿನೋಡ್ ಟಿ.ಆರ್. ವಂದಿಸಿದರು.
