ತೊಕ್ಕೊಟ್ಟು ಒಳಪೇಟೆ ಬಿ.ಆರ್ ಬೇಕರಿಗೆ ನುಗ್ಗಿದ ಕಳ್ಳ
ತೊಕ್ಕೊಟ್ಟು: ಇಲ್ಲಿನ ಒಳಪೇಟೆಯಲ್ಲಿರುವ ಬಿ.ಆರ್ ಬೇಕರಿ ಒಳನುಗ್ಗಿರುವ ಕಳ್ಳನೋರ್ವ ಕ್ಯಾಷ್ ನಲ್ಲಿದ್ದ ರೂ. 30,000 ನಗದು ಕಳವುಗೈದಿದ್ದಾನೆ. ಕಳ್ಳನ ಕೃತ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 5 ವರ್ಷಗಳಿಂದ ತೊಕ್ಕೊಟ್ಟು ಒಳಪೇಟಯಲ್ಲಿ ಬಿ.ಆರ್ ಬೇಕರಿ ಕಾರ್ಯಾಚರಿಸುತ್ತಿದೆ. ಉತ್ತಮ ಗುಣಮಟ್ಟದ ಸಿಹಿತಿಂಡಿಗಳನ್ನು ಗ್ರಾಹಕರಿಗೆ ಪೂರೈಸುವ ಮೂಲಕ ಈ ಭಾಗದಲ್ಲಿ ಹೆಸರುವಾಸಿಯಾಗಿದೆ. ನಿನ್ನೆ ತಡರಾತ್ರಿ ಕೇಕ್ ಗೋಡೌನ್ ಹಿಂಬದಿಯ ಗೋಡೆಯನ್ನು ಕೊರೆದು ಬೇಕರಿ ಅಂಗಡಿಯೊಳಕ್ಕೆ ಹರಿತವಾದ ಆಯುಧವನ್ನು ಹಿಡಿದುಕೊಂಡು ಒಳನುಗ್ಗಿದ ಕಳ್ಳ ಕ್ಯಾಷ್ ಡ್ರಾವರನ್ನು ಒಡೆದು ರೂ.30,000 ನಗದು ಹಾಗೂ ಮೊಬೈಲ್ ಅನ್ನು ಕಳವು ನಡೆಸಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಸ್ಕ್ ಧರಿಸದೇ , ಗಡ್ಡಧಾರಿಯಾಗಿರುವ ಕಳ್ಳ ಗ್ರಾಹಕನ ಸೋಗಿನಲ್ಲಿ ಬಂದು ಎಲ್ಲವನ್ನು ಗಮನಿಸಿ ಕೃತ್ಯ ಎಸಗಿರುವ ಶಂಕೆಯಿದೆ.
ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
