ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮಾಲಕರಿಗೆ ಹಣಕ್ಕಾಗಿ ಪೀಡನೆ, ಹಲ್ಲೆ ಯತ್ನ ಮೂವರು ಆರೋಪಿಗಳ ಬಂಧನ
ಮಂಗಳೂರು: ಮುಲ್ಕಿ ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಕೋಣದ ಮಾಲಕರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಪೀಡನೆ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಪ್ರದೇಶದಲ್ಲಿ ನಡೆದಿದೆ.
ಅಂಗಾರಗುಡ್ಡೆ ಕೆಂಚನಕೆರೆ ನಿವಾಸಿ ಶಂಸುದ್ದೀನ್ ಅವರ ಮನೆಗೆ ನುಗ್ಗಿದ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಹಾಗೂ ಸುವೀನ್ ಕಾಂಚನ್ ಎಂಬ ಮೂವರು ಆರೋಪಿಗಳು, “ದನಗಳನ್ನು ಕಡಿಯಲು ಕೊಡ್ತೀಯಲ್ಲವಾ?” ಎಂದು ಬೆದರಿಕೆ ಹಾಕಿ ಹಫ್ತಾ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಶಂಸುದ್ದೀನ್ ಅವರು ಮುಂಬೈನಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ, ಜಾಗ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದರು.
ಇತ್ತೀಚೆಗೆ ಮುಲ್ಕಿಯ ಅರಸು ಕಂಬಳದಲ್ಲಿ ಶಂಸುದ್ದೀನ್ ತಂದಿದ್ದ ಕೋಣಗಳಿಗೆ ಬಹುಮಾನ ಲಭಿಸಿದ್ದು, ಅದರೊಂದಿಗೆ ದೊರೆತ ಬಂಗಾರದ ಸರ ಹಾಗೂ ಹಣವನ್ನು ನೀಡುವಂತೆ ಆರೋಪಿಗಳು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸಿ ಆರೋಪಿಗಳನ್ನು ತಡೆದು ಓಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಹಾಗೂ ಸುವೀನ್ ಕಾಂಚನ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
