ಮೂರು ದಿನಗಳ ‘ಸಮಾಧಾನ ಮಹೋತ್ಸವ’ಕ್ಕೆ ಅದ್ದೂರಿ ಚಾಲನೆ
ಉಡುಪಿ: ಸಮಾಧಾನ ಮಹೋತ್ಸವ ಹೃದಯಗಳ ಪರಿವರ್ತನೆ, ನಂಬಿಕೆಯ ನವೀಕರಣ ಮತ್ತು ಶಾಂತಿಯ ಅನುಭವಕ್ಕೆ ದೇವರು ನೀಡಿದ ಅಪೂರ್ವ ಅವಕಾಶ ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೆಷೀತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಮಿಷನ್ ಕಂಪೌಂಡ್ ಮೈದಾನದಲ್ಲಿ ಉಡುಪಿ ಜಿಲ್ಲೆಯ ಫೆಲೋಶಿಪ್ ಚರ್ಚಸ್ ಇವರ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ ಪ್ರತಿಯೊಂದು ಧರ್ಮಗಳಿಗೂ ತಮ್ಮ ತಮ್ಮ ಆಚರಣೆಗಳಿಗೆ ದೇಶದಲ್ಲಿ ಮುಕ್ತ ಅವಕಾಶವಿದ್ದು ನಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಿದಾಗ ಶಾಂತಿಯ ಸಂದೇಶ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.
ಸಿಎಸ್ ಐ ಕರ್ನಾಟಕ ಸದರ್ನ್ ಡಯಾಸಿಸ್ ಇದರ ಧರ್ಮಾಧ್ಯಕ್ಷರಾದ ಅತಿ ವಂ|ಹೇಮಚಂದ್ರ ಕುಮಾರ್ ಮಾತನಾಡಿ ಮೂರು ದಿನಗಳ ಸಮಾಧಾನ ಮಹೋತ್ಸವ ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸಲು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೂ ಮುನ್ನ ಸುಮಾರು 200ಕ್ಕೂ ಅಧಿಕ ಮಂದಿ ಗಾಯನ ತಂಡದ ನೇತೃತ್ವದಲ್ಲಿ ಸ್ತುತಿಗೀತೆಗಳ ಗಾಯನ ಜರುಗಿತು.
ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭಕ್ತಿ ಸಂಜೀವನ ಕೂಟಗಳನ್ನು ನಡೆಸಿಕೊಡಲಿರುವ ಘನ ಮೋಹನ್ ಸಿ.ಲಾಝರಸ್, ಪಾಸ್ಟರ್ ಟಿ ವಿ ಗೋಪಿನಾಥನ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ ವೇದಿಕೆಯಲ್ಲಿ ಉಪಸ್ಥೀತರಿದ್ದರು.