ಪ್ರವಾಸಿ ಬೋಟ್ ದುರಂತ: ಶಾಸಕ ಯಶಪಾಲ್ ಹೇಳಿಕೆ ‘ಕುಣಿಯಲಾಗದವ ನೆಲ ಡೊಂಕು’ ಎಂಬಂತಿದೆ :ಪ್ರಸಾದ್ ರಾಜ್ ಕಾಂಚನ್
ಉಡುಪಿ: ಕೋಡಿಬೆಂಗ್ರೆಯಲ್ಲಿ ನಡೆದ ಪ್ರವಾಸಿ ಬೋಟ್ ದುರಂತಕ್ಕೆ ಸಂಬಂಧಿಸಿ ಶಾಸಕ ಯಶ್ಪಾಲ್ ಸುವರ್ಣ ಅವರು ನೀಡಿರುವ ಹೇಳಿಕೆ ಕುಣಿಯಲಾಗದವ ನೆಲ ಡೊಂಕು ಎಂಬಂತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಹೊರಜಿಲ್ಲೆಯಿಂದ ಬಂದ ಪ್ರವಾಸಿಗರು ಬೋಟ್ ದುರಂತದಲ್ಲಿ ಸಾವಿಗೀಡಾಗಿರುವುದು ನೋವಿನ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯ ಕುರಿತು ಈಗಾಗಲೇ ಸೂಕ್ತ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ.
ಇಂತಹ ನೋವಿನ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿಕೊಂಡು ಘಟನೆಯ ಕುರಿತು ಕೂಲಂಕುಷವಾದ ತನಿಖೆ ಮಾಡಲು ಸಹಕಾರ ನೀಡಬೇಕಾಗಿದ್ದ ಶಾಸಕರು ವೃತಾ ಹೇಳಿಕೆ ನೀಡುವ ಮೂಲಕ ತನಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುವುದು ಖಂಡನೀಯ.
ಪ್ರಸ್ತುತ ಉಡುಪಿಯಲ್ಲಿ ಸ್ಥಳೀಯಾಡಳಿತ ಅಧಿಕಾರದಲ್ಲಿ ಇಲ್ಲ. ಕೋಡಿಬೇಂಗ್ರೆ ಉಡುಪಿ ಶಾಸಕರ ಆಡಳಿತ ವ್ಯಾಪ್ತಿಗೆ ಬರುತ್ತಿದ್ದು ಸರಕಾರದ ಅಡಿಯಲ್ಲಿ ಯಾವೆಲ್ಲ ಇಲಾಖೆಗಳು ಕಾರ್ಯಾಚರಿಸುತ್ತವೆಯೋ ಅದೆಲ್ಲವುದರ ಹೊಣೆಗಾರಿಕೆ ಇರುವುದು ಸ್ಥಳೀಯ ಶಾಸಕರಿಗೆ ಎನ್ನುವುದು ಅವರಿಗೆ ತಿಳಿದಿರುವ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯನ್ನು ಶಾಸಕರೇ ದೂರುವುದು ತಪ್ಪಾಗುತ್ತದೆ. ಜಿಲ್ಲಾಡಳಿತ ಅಥವಾ ಇಲಾಖೆಯಲ್ಲಿ ಸಮಸ್ಯೆಗಳು ಇದ್ದಲ್ಲಿ ಅದನ್ನು ಪರಿಹರಿಸಬೇಕಾಗಿರುವುದು ಸ್ಥಳೀಯ ಶಾಸಕರ ಜವಾಬ್ದಾರಿಯಾಗಿದೆ. ನಮ್ಮ ಉಡುಪಿ ಶಾಸಕರಿಗೆ ಆಡಳಿತ ನಡೆಸುವುದು ಹೇಗೆ ಎನ್ನುವುದು ಇನ್ನೂ ಕೂಡ ತಿಳಿದಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಶಾಸಕರು ತಮ್ಮ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿ ಎಲ್ಲಾ ಇಲಾಖೆಗಳಲ್ಲಿ ಪಾರದರ್ಶಕವಾದ ವ್ಯವಸ್ಥೆಯನ್ನು ಮಾಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರಸಾದ್ ರಾಜ್ ಕಾಂಚನ್ ಆಗ್ರಹಿಸಿದ್ದಾರೆ.
