ಮುಲ್ಕಿ ಕೊಲ್ನಾಡು ಬಳಿ ಪ್ರವಾಸಿ ಮಿನಿ ಬಸ್ ಡಿಕ್ಕಿ: ಶಾಲಾ ಬಸ್ ಚಾಲಕ, 13 ವಿದ್ಯಾರ್ಥಿಗಳಿಗೆ ಗಾಯ
ಮಂಗಳೂರು: ಮುಲ್ಕಿ ಸಮೀಪದ ಕೊಲ್ನಾಡು ಬಳಿ ಪ್ರವಾಸಿ ಮಿನಿ ಬಸ್ ಶಾಲಾ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್ ಚಾಲಕ ಸೇರಿದಂತೆ 13 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಅಕ್ಟೋಬರ್ 23ರಂದು ಸಂಜೆ ನಡೆದಿದೆ.

ಬೆಂಗಳೂರಿನ ಎಸ್ಆರ್ಎಸ್ ಟೂರಿಸ್ಟ್ಗೆ ಸೇರಿದ ಕೆಎ-01-ಎಆರ್-1655 ನೋಂದಣಿ ಸಂಖ್ಯೆಯ ಮಿನಿ ಬಸ್ ಅನ್ನು ಚಾಲಕ ದೇವರಾಜ್ ಎಂಬವರು ಮುಲ್ಕಿಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದರು. ಸಂಜೆ ಸುಮಾರು 3.40ರ ವೇಳೆಗೆ ಕೊಲ್ನಾಡಿನ ಸುಂದರರಾಮ್ ಶೆಟ್ಟಿ ಸಭಾಂಗಣದ ಬಳಿ ನಿಂತಿದ್ದ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ನ ಶಾಲಾ ಬಸ್ಸಿಗೆ ಮಿನಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮಿನಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ದುಡುಕಿನ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಶಾಲಾ ಬಸ್ ಸಮೀಪದ ಚರಂಡಿಗೆ ಬಿದ್ದಿದ್ದು, ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಹಾಗೂ ಚಾಲಕ ದೇವದಾಸ್ ಅವರಿಗೆ ಸಾಮಾನ್ಯ ಗಾಯಗಳಾಗಿವೆ. ಗಾಯಾಳುಗಳನ್ನು ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 248/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.