ಪ್ರಜಾಸೌಧದಲ್ಲಿ ಮುಖ್ಯಮಂತ್ರಿ, ಸಚಿವರಿಗೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ
ಮಂಗಳೂರು : ಮಂಗಳೂರಿನ ಪ್ರಜಾ ಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಕರಾವಳಿಯ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಸಚಿವ ಸಂಪುಟ ಸಭೆಗೆ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಐರಾವತ ಬಸ್ನಲ್ಲಿ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.

ಅಲ್ಲಿಂದ ಪಂಪ್ವೆಲ್ಗೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಸಚಿವರನ್ನು ತೆರೆದ ಡಬಲ್ ಡೆಕ್ಕರ್ ಬಸ್ನಲ್ಲಿ ಪಂಪ್ವೆಲ್ನಿಂದ ಪಡೀಲ್ನ ಪ್ರಜಾ ಸೌಧದವರೆಗೆ ಮೆರವಣಿಗೆಯ ಮೂಲಕ ಕರೆತರಲಾಯಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ಸ್ವಾಗತ ಕೋರಿದರು.
ಪ್ರಜಾ ಸೌಧದ ಪ್ರವೇಶ ದ್ವಾರದ ಬಳಿ ಕಲ್ಲಡ್ಕದ ಸಾಂಪ್ರದಾಯಿಕ ಗೊಂಬೆ ಪ್ರದರ್ಶನ ಹಾಗೂ ಪೂರ್ಣಕುಂಭದೊಂದಿಗೆ ಆತಿಥ್ಯ ನೀಡಿ ಮುಖ್ಯಮಂತ್ರಿ ಮತ್ತು ಸಚಿವರನ್ನು ಬರಮಾಡಿಕೊಳ್ಳಲಾಯಿತು.
ಪ್ರಜಾ ಸೌಧದ ಆವರಣ ಪ್ರವೇಶಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರೊಂದಿಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.
ಬಳಿಕ ಪ್ರಜಾ ಸೌಧದ ಎದುರಿನ ಧ್ವಜಸ್ತಂಭದ ಬಳಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರು ಗುಂಪು ಛಾಯಾಚಿತ್ರಕ್ಕೆ ಪೋಸ್ ನೀಡಿ ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸಿದರು.