ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಉಡುಪಿ ಜಿಲ್ಲಾ ಎನ್ ಎಸ್ ಯು ಐ , ಯುವ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಖಂಡಿಸಿ ಉಡುಪಿ ಜಿಲ್ಲಾ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಹಾಗೂ ಯುವ ಕಾಂಗ್ರೆಸ್ ಸೋಮವಾರ ಮಣಿಪಾಲದ ಟೈಗರ್ ಸರ್ಕಲ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿತು.
ಈ ವೇಳೆ ಮಾತನಾಡಿದ ಎನ್ಎಸ್ಯುಐನ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್ ಬಲ್ಲಾಳ್ ಬಿಜೆಪಿ ನೇತೃತ್ಯದ ಕೇಂದ್ರ ಸರಕಾರದಡಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸಿದ ನೀಟ್-ಯುಜಿ 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮ ಗಳಿಂದಾಗಿ ರದ್ದಾಗಿದ್ದು, ಕಳೆದ 3 ವರ್ಷಗಳಲ್ಲಿ 2ನೇ ಬಾರಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಮೆಡಿಕಲ್ ಶಿಕ್ಷಣದ ಕನಸನ್ನು ಕೋಚಿಂಗ್ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಹರಾಜು ಹಾಕಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು
ನ್ಯಾಯಯುತ, ಪಾರದರ್ಶಕ ರಾಷ್ಟ್ರೀಯ ಪರೀಕ್ಷೆ ನಡೆಸುವಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ಅಸಮರ್ಥತೆ ಯನ್ನು ಸಾಬೀತುಪಡಿಸಿದೆ. ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು 2 ವರ್ಷ ಗಳ ತಯಾರಿ ನಡೆಸಿ, ಕೋಚಿಂಗ್ಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಈಗ ಅನಿಶ್ಚಿತತೆ ಮತ್ತು ತೀವ್ರ ಮಾನಸಿಕ ಆಘಾತ ಎದುರಿಸುವಂತಾಗಿದೆ ಎಂದವರು ಹೇಳಿದರು.
ವಿದ್ಯಾರ್ಥಿಗಳ ತಪ್ಪಿಲ್ಲದೆ ಮರು-ಪರೀಕ್ಷೆ ಅನ್ಯಾಯದ ಶಿಕ್ಷೆಯಾಗಿದೆ. ಎನ್ಟಿಎ ಪದೇ ಪದೇ ವಿಫಲವಾಗಿ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿರುವ ಎನ್ಟಿಎಯನ್ನು ತಕ್ಷಣ ವಿಸರ್ಜಿಸಬೇಕೆಂದು ಸೌರವ ಬಲ್ಲಾಳ್ ಆಗ್ರಹಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಕೋಚಿಂಗ್ ಮಾಫಿಯಾ- ಎನ್ಟಿಎ ನಂಟನ್ನು ಬಯಲಿಗೆಳೆಯಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ನ್ಯಾಯಾಂಗ ಆಯೋಗ ರಚಿಸಿ ಕಠಿಣ ಶಿಕ್ಷೆ ನೀಡಬೇಕು.
ಇಡೀ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕರ್ನಾಟಕಕ್ಕೆ ಪ್ರತ್ಯೇಕ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದ ಬಲ್ಲಾಳ್, ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ಸಿಇಟಿ ಮೂಲಕ ನಡೆಸುವಂತೆ ಆಗ್ರಹಿಸಿದರು.
ಬಳಿಕ ಪ್ರತಿಭಟನಕಾರರು ರಸ್ತೆ ನಡೆಸಲು ಯತ್ನಿಸಿದರು. ಆದರೆ ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ನಾಯರಿ, ಎನ್ಎಸ್ಯುಐ ಉಪಾಧ್ಯಕ್ಷ ಶರತ್ ಕುಂದರ್, ರಾಜ್ಯ ಕಾರ್ಯದರ್ಶಿ ಅನೀಶ್ ಕುಮಾರ್, ಯುವ ಸಜ್ಜನ್ ಶೆಟ್ಟಿ, ಸುದೇಶ್ ಶೆಟ್ಟಿ, ಸೂರಜ್ ಶೆಟ್ಟಿ, ಮಲ್ಲಿಕ್ ಅತ್ತೂರು, ಸೃಜನ್ ಶೆಟ್ಟಿ, ಸುಮಂತ್ ಶೆಟ್ಟಿ, ಪ್ರಮೋದ್ ಪೂಜಾರಿ, ಮಂಜುನಾಥ್ ಜೋಗಿ, ಗೌರಿಶ್ ಕೋಟ್ಯಾನ್, ಮಹಮ್ಮದ್ ನಿಯಾಜ್, ಸಿರಾಝ್ ಶೇಖ್ ಮತ್ತು ಇತರರು ಉಪಸ್ಥಿತರಿದ್ದರು.
