ಉಡುಪಿ: ಪರ್ಯಾಯ ಉತ್ಸವವನ್ನು ರಾಜಕೀಯ ವಿವಾದಕ್ಕೆ ಎಳೆಯುವುದು ಖಂಡನೀಯ – ಸುನಿಲ್ ಡಿ. ಬಂಗೇರ
ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರಬಿಂದುಗೊಳಿಸುವ ಪ್ರಯತ್ನ ಅಪಾಯಕಾರಿ ಹಾಗೂ ಖಂಡನೀಯವಾಗಿದೆ ಎಂದು ವಿಷ್ಣುಮೂರ್ತಿ ದೇವಸ್ಥಾನ ಮಟ್ಟು ಆಡಳಿತ ಮೊಕ್ತೇಸರರಾದ ಸುನಿಲ್ ಡಿ. ಬಂಗೇರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಇತ್ತೀಚೆಗೆ ನೀಡಿರುವ ಪತ್ರಿಕಾ ಹೇಳಿಕೆ ಶಾಂತಿ ಕಾಪಾಡುವ ಜವಾಬ್ದಾರಿಯುತ ನಡೆಗಿಂತ ಸಮಾಜದಲ್ಲಿ ಗೊಂದಲ ಹಾಗೂ ಧ್ರುವೀಕರಣ ಉಂಟುಮಾಡುವ ರಾಜಕೀಯ ಉದ್ದೇಶವನ್ನೇ ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು ಧಾರ್ಮಿಕ ವಿಚಾರಗಳಲ್ಲಿ ಸಂಯಮ ವಹಿಸಬೇಕಾಗಿದ್ದು, ಧಾರ್ಮಿಕ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಅಸಹಿಷ್ಣು ರಾಜಕೀಯ ಮನೋಭಾವದ ಪ್ರತಿಫಲನವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದು ಧರ್ಮ ರಕ್ಷಣೆ ಅಲ್ಲ, ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.
ಪರ್ಯಾಯದಂತಹ ಸಂವೇದನಾಶೀಲ ಸಂದರ್ಭದಲ್ಲೇ ಈ ರೀತಿಯ ಹೇಳಿಕೆ ನೀಡಿರುವುದು ಸಮಾಜದಲ್ಲಿ ಆತಂಕ ಮತ್ತು ಅನುಮಾನ ಬಿತ್ತುವ ಉದ್ದೇಶಪೂರ್ವಕ ತಂತ್ರವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಶಾಸಕರಿಂದ ಪ್ರಚೋದನಾತ್ಮಕ ಭಾಷೆ ಹೊರಬರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸಮಾಜದಲ್ಲಿ ಅಶಾಂತಿ ಉಂಟಾದಲ್ಲಿ ಅದರ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಶಾಸಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಂತರ ನೀಡುವ ಸ್ಪಷ್ಟೀಕರಣಗಳು ಅಥವಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಗಳಿಗೆ ಶಾಂತಿಪ್ರಿಯ ಜನತೆ ಮರುಳಾಗುವುದಿಲ್ಲ ಎಂದು ಸುನಿಲ್ ಡಿ. ಬಂಗೇರ ಎಚ್ಚರಿಕೆ ನೀಡಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಇಂತಹ ಪ್ರಯತ್ನಗಳು ಮುಂದುವರಿದರೆ ಸಮಾಜದ ಸಹನೆ ಮಿತಿಯನ್ನು ಮೀರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಶಾಂತಿ, ಸಂಪ್ರದಾಯ ಮತ್ತು ಸಹಬಾಳ್ವೆಯನ್ನು ಗೌರವಿಸುವ ಜನರು ಮೌನವಾಗಿರುತ್ತಾರೆ ಎಂದು ತಪ್ಪಾಗಿ ಅಂದಾಜಿಸಬಾರದು ಎಂದು ಅವರು ತಿಳಿಸಿದ್ದಾರೆ.
ಪರ್ಯಾಯದಂತಹ ಪವಿತ್ರ ಉತ್ಸವಗಳನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿ ಮಾಡುವ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿರುವ ಅವರು, ಇಲ್ಲವಾದಲ್ಲಿ ಸಮಾಜದಿಂದ ಬರುವ ಪ್ರತಿರೋಧಕ್ಕೆ ನೈತಿಕ ಹಾಗೂ ರಾಜಕೀಯ ಹೊಣೆ ಹೊರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಇದು ಯಾವುದೇ ವೈಯಕ್ತಿಕ ದ್ವೇಷದಿಂದ ನೀಡಿದ ಹೇಳಿಕೆ ಅಲ್ಲ, ಸಮಾಜದ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಕಠಿಣ ಎಚ್ಚರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
