ಉಡುಪಿ: SIR ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ಸುಲಿಗೆ;ಇಬ್ಬರ ಬಂಧನ
ಉಡುಪಿ: ಜನಗಣತಿ (SIR) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ 74 ವರ್ಷದ ವೃದ್ಧೆಯನ್ನು ಕೆಳಕ್ಕೆ ದೂಡಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ ಪ್ರಕರಣವನ್ನು ಉಡುಪಿ ನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನದ ಸರ ಸೇರಿದಂತೆ ಒಟ್ಟು 5.53 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನ ವಾದಿರಾಜ್ ಗಾಣಿಗ (44) ಹಾಗೂ ಕಾಪು ತಾಲೂಕಿನ ಪಡು ಗ್ರಾಮದ ಸಚಿನ್ (30) ಎಂದು ಗುರುತಿಸಲಾಗಿದೆ. ಅಕ್ಟೋಬರ್ 10ರಂದು ಮಣಿಪಾಲದ ಮಣ್ಣಪಳ್ಳ ಪ್ರದೇಶದಲ್ಲಿ ಸ್ಥಳೀಯ ಮಾಹಿತಿದಾರರಿಂದ ದೊರೆತ ಖಚಿತ ಮಾಹಿತಿ ಆಧರಿಸಿ ಉಡುಪಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, ನಿಟ್ಟೂರಿನ ನಿವಾಸಿ ಶ್ರೀನಿವಾಸ ಕಾರಂತ್ (49) ಅವರು ಅಕ್ಟೋಬರ್ 7ರಂದು ನೀಡಿದ ದೂರಿನಂತೆ, ಅವರ ತಾಯಿ ಶಾಂತ ಕಾರಂತ್ (74) ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅಂದು ಸಂಜೆ ಸುಮಾರು 3.47ರ ವೇಳೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಜನಗಣತಿ (SIR) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದರು. ಶಾಂತ ಕಾರಂತ್ ಅವರು ತಮ್ಮ ಮಗನನ್ನು ಕೇಳಿ, ಅವರು ತಂದಿದ್ದ ಕಾಗದಕ್ಕೆ ಸಹಿ ಮಾಡುವುದಾಗಿ ಹೇಳಿ ಮನೆಯೊಳಗೆ ಹೋದಾಗ, ಇಬ್ಬರೂ ಒಳನುಗ್ಗಿ ಅವರನ್ನು ದೂಡಿ ಕೆಳಕ್ಕೆ ಬೀಳಿಸಿದ್ದಾರೆ. ಬಳಿಕ ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೆಟ್ ಮಣಿಗಳಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಕಳವಾದ ಸರದ ಅಂದಾಜು ಮೌಲ್ಯ 4 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(4) ಮತ್ತು 3(5)ರಂತೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆ ಹಾಗೂ ಕಳವಾದ ಸೊತ್ತಿನ ವಶಪಡಿಸಿಕೊಳ್ಳುವಿಕೆಗಾಗಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಲಿಗೆ ಮಾಡಿದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ಆರೋಪಿಗಳು ಮಾಹಿತಿ ನೀಡಿದ್ದರು. ಅದರಂತೆ 34 ಗ್ರಾಂ ತೂಕದ, ಅಂದಾಜು 4.50 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಸುಮಾರು 90 ಸಾವಿರ ರೂ. ಮೌಲ್ಯದ KA20HG4761 ನೋಂದಣಿ ಸಂಖ್ಯೆಯ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸುಮಾರು 13 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 5.53 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೊದಲ ಆರೋಪಿ ದೂರುದಾರರ ನೆರೆಕರೆಯವನಾಗಿದ್ದು, ದೂರುದಾರರು ಸೇರಿದಂತೆ ಇತರರಿಂದ ಸಾಲ ಪಡೆದಿದ್ದ ಎನ್ನಲಾಗಿದೆ. ಎರಡನೇ ಆರೋಪಿಯೂ ಸಾಲ ಮಾಡಿಕೊಂಡಿದ್ದರಿಂದ, ಸಾಲ ತೀರಿಸುವ ಹಾಗೂ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 10ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಅವರ ನೇತೃತ್ವದಲ್ಲಿ ಉಡುಪಿ ನಗರ ಠಾಣೆಯ ಪಿಎಸ್ಐಗಳಾದ ಭರತೇಶ ಕಂಕಣವಾಡಿ ಮತ್ತು ರತ್ನಾಕರ್ ಕೆ., ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಅಬ್ದುಲ್ ಬಶೀರ್, ಆನಂದ ಎಸ್. ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್ ಮತ್ತು ಹೇಮಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ತನಿಖಾ ಸಹಾಯಕರಾದ ನೇತ್ರಾವತಿ ಮತ್ತು ಸುರೇಂದ್ರ ಡಿ. ಸಹಕರಿಸಿದ್ದರು.
