ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ವಿದ್ಯಾರ್ಥಿಗಳನ್ನು ಭಯೋತ್ಪಾದಕರು, ದೇಶದ್ರೋಹಿಗಳಂತೆ ಬಿಂಬಿಸಿದಕ್ಕೆ ಕ್ಷಮೆ ಕೇಳಲಿ : ನವೀನ್ ಸಾಲಿಯಾನ್
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳಂತೆ ಬಿಂಬಿಸಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಲಕ್ಷಾಂತರ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ಪರಿಣಾಮವಾಗಿ ಕೇಂದ್ರ ಸರ್ಕಾರದ ಮೇಲೆ ಇವತ್ತು ಒತ್ತಡ ಉಂಟಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.
ಅಲ್ಲದೆ, ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿದ್ದು, ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸಂಸತ್ತಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರೂ ಉಡುಪಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದು ಆಶ್ಚರ್ಯಕರವಾಗಿದೆ. ಕೇಂದ್ರ ಸರ್ಕಾರವೇ ತನ್ನ ತಪ್ಪನ್ನು ಅರಿತು ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕ್ರಮ ಕೈಗೊಂಡಿದ್ದರೂ, ಉಡುಪಿ ಬಿಜೆಪಿ ನಾಯಕರು ವಿದ್ಯಾರ್ಥಿ ಹೋರಾಟವನ್ನು ಟೀಕಿಸಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಸೇರಿದಂತೆ ಜಿಲ್ಲೆಯ ಶಾಸಕರು ಅಸಂಬದ್ಧವಾಗಿ ಮಾತನಾಡಿ, ಇಡೀ ವಿದ್ಯಾರ್ಥಿ ಸಮುದಾಯವನ್ನು ನಿಂದಿಸಿದ್ದಾರೆ. ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸಿ ಹೀಯಾಳಿಸಿದ್ದು ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ನವೀನ್ ಸಾಲಿಯಾನ್ ಆರೋಪಿಸಿದ್ದಾರೆ.
ಅಲ್ಲದೆ,ಲೋಕಸಭೆಯ ವಿರೋಧ ಪಕ್ಷದ ನಾಯಕ ಸನ್ಮಾನ್ಯ ರಾಹುಲ್ ಗಾಂಧಿ ಅವರ ಬಗ್ಗೆ ಹಗುರವಾದ ಬಾಷೆ ಅಲ್ಲಿ ಮಾತನಾಡಿರುವುದನ್ನು ಅವರು ಖಂಡಿಸಿದ್ದಾರೆ.ಇದು ಸಾಂವಿಧಾನಿಕ ಹುದ್ದೆಯಲ್ಲಿರುವ ಯಶ್ಪಾಲ್ ಸುವರ್ಣ ಅವರು ಬುದ್ಧಿವಂತರ ಜಿಲ್ಲೆ ಉಡುಪಿಯ ಜನಪ್ರತಿನಿಧಿಯಾಗಿ ಮಾತನಾಡಿರುವುದು ತರವಲ್ಲ ಎಂದು ಅವರು ಹೇಳಿದ್ದಾರೆ.
2024ರಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆದ ಕಾರಣಕ್ಕೆ 2 ವರ್ಷಗಳ ಹಿಂದೆ ಹೊಸ ಕಾಯ್ದೆ ಜಾರಿ ಮಾಡಲಾಯಿತು.ಆದರೆ,ಆಗಿದ್ದೇನು?ಈ ವರ್ಷ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು.
ವೈಪಲ್ಯ ಎದುರಿಸಿದಾಗಲೆಲ್ಲ ಕಾನೂನು ಬದಲಿಸುವ ಕಲೆಯನ್ನು ಈ ಸರಕಾರ ರೂಢಿಸಿಕೊಂಡಿದೆ.ನಿಮ್ಮ 12 ವರ್ಷಗಳ ಅಸಮರ್ಥತೆ ಮತ್ತು ವೈಪಲ್ಯವನ್ನು ಈ ಮಸೂದೆ ತೊಡೆದು ಹಾಕಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಒಡೆದುಹೋದ ಕನಸುಗಳನ್ನು ಜೋಡಿಸಲು ಅದಕ್ಕೆ ಸಾದ್ಯವಿಲ್ಲ.
ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ವಿದ್ಯಾರ್ಥಿ ಹೋರಾಟದಲ್ಲಿ ಭಾಗವಹಿಸಿದ್ದವರನ್ನು ದೇಶದ್ರೋಹಿಗಳು ಹಾಗೂ ಭಯೋತ್ಪಾದಕರಂತೆ ಬಿಂಬಿಸಿರುವುದು ಅತ್ಯಂತ ಖಂಡನೀಯ. ಈ ಸಂಬಂಧ ಉಡುಪಿ ಶಾಸಕರು ಶೀಘ್ರ ವಿದ್ಯಾರ್ಥಿಗಳ ಹಾಗೂ ಸಮಸ್ತ ಉಡುಪಿ ಜನತೆಯ ಕ್ಷಮೆ ಕೋರಬೇಕು ಎಂದು ನವೀನ್ ಸಾಲಿಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
