ಉಡುಪಿ ನೂತನ ಧರ್ಮಾಧ್ಯಕ್ಷರ ಪೀಠಾರೋಹಣಕ್ಕೆ ಸಿದ್ದತೆ ಪೂರ್ಣ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಾರ್ಪಾಡು
ಉಡುಪಿ: ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭವು ಏಪ್ರಿಲ್ 20, 2026ರಂದು ಸೋಮವಾರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದ್ದು ಕೊನೆಯ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.

ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭ ಅತ್ಯಂತ ಪವಿತ್ರ ಕಾರ್ಯಕ್ರಮವಾಗಿದ್ದು ಈ ವೇಳೆಯಲ್ಲಿ ವೇದಿಕೆಯ ಬಳಿ ಕಾರ್ಯಕ್ರಮದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಸಾರ್ವಜನಿಕರಿಗೆ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ ನಿಷೇಧಿಸಿದೆ. ಮಾಧ್ಯಮದವರಿಗೆ ಫೋಟೊ ಮತ್ತು ವೀಡಿಯೊಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭವನ್ನು ಸಂಪೂರ್ಣವಾಗಿ ನೇರಪ್ರಸಾರ ಮಾಡಲಾಗುತ್ತಿದ್ದು ವಿದೇಶದಲ್ಲಿರುವ ಕ್ರೈಸ್ತ ಭಕ್ತಾದಿಗಳು ಕೂಡ ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಮೂಲಕ ತಯಾರಿಗಳು ಭರದಿಂದ ನಡೆದಿದ್ದು ಕೊನೆಯ ಹಂತದ ಕೆಲಸಗಳು ಮಾತ್ರ ಬಾಕಿ ಇವೆ.
ಏಪ್ರಿಲ್ 20 ರಂದು ಬೆಳಿಗ್ಗೆ 8.15ಕ್ಕೆ ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ, ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಡಾ. ಲಿಯೋಪೋಲ್ಡೊ ಗಿರೆಲ್ಲಿ, ಹಾಗೂ ನೂತನ ಧರ್ಮಾಧ್ಯಕ್ಷರಾದ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಇವರುಗಳನ್ನು ಮಿಲಾಗ್ರಿಸ್ ಪ್ರಧಾನಾಲಯದ ಪ್ರವೇಶ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದ ಬಳಿಕ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ.
ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಧರ್ಮಗುರುಗಳು, ಅಷ್ಟೇ ಸಂಖ್ಯೆ ಧರ್ಮಭಗಿನಿಯರು ಹಾಗೂ 6000 ಮಂದಿ ಸಾರ್ವಜನಿಕರು, ವಿವಿಧ ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದು ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಮಾಡಲಾಗಿದೆ.
ವಾಹಗಳ ವ್ಯವಸ್ಥಿತ ಪಾರ್ಕಿಂಗ್ ಮಾಡಲು ವಿವಿಧ ಸ್ಥಳಗಳನ್ನು ಗುರುತಿಸಲಾಗಿದ್ದು ಅದರ ವಿವರ ಇಂತಿದೆ.
ಮಿಲಾಗ್ರಿಸ್ ಪ್ರಧಾನಾಲಯದ ಆವರಣ: ನುನ್ಸಿಯೋ, ಕಾರ್ಡಿನಲ್, ಆರ್ಚ್ ಬಿಷಪ್ ಮತ್ತು ಇತರ ಧರ್ಮಾಧ್ಯಕ್ಷರುಗಳು, ಮಾಧ್ಯಮ ಹಾಗೂ ಗಾಯನ ತಂಡದ ವಾಹನಗಳು
ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಾಲೇಜು ಆವರಣ: ಧರ್ಮಗುರುಗಳು ಹಾಗೂ ಧರ್ಮಭಗಿನಿಯರು.
ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣ: ಸಾರ್ವಜನಿಕರ ವಾಹನಗಳು
ವಿಲ್ಸನ್ ಫೆರ್ನಾಂಡಿಸ್ ಮೈದಾನ: ಶಂಕರಪುರ ಮತ್ತು ಶಿರ್ವ ಚರ್ಚಿನ ಭಕ್ತಾದಿಗಳ ವಾಹನಗಳು(ಬಸ್ಸುಗಳನ್ನು ಹೊರತುಪಡಿಸಿ)
ಪೈ ಶಾಲಾ ಆವರಣ: ಗೌರವ ಅತಿಥಿಗಳು
ಜೊವಿಟಾ ಮೈದಾನ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ : ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ.
ಮಿಲಾಗ್ರಿಸ್ ಹೋಮ್: ಧರ್ಮಾಧ್ಯಕ್ಷರುಗಳ ವಾಹನಗಳು
ಆಲ್ವಿನ್ ನಜರೆತ್ ಮೈದಾನ: ಕೆಮ್ಮಣ್ಣು, ಮೌಂಟ್ ರೋಸರಿ, ತೊಟ್ಟಂ, ಮಿಲಾಗ್ರಿಸ್ ಚರ್ಚಿನ ಭಕ್ತಾದಿಗಳ ವಾಹನ ನಿಲುಗಡೆಗೆ ಅವಕಾಶ
ವಾಹನ ದಟ್ಟಣೆ ಹೆಚ್ಚಾದಲ್ಲಿ ನೇಜಾರು ಮೈದಾನದಲ್ಲಿ ಕೂಡ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಕಾರ್ಯಕ್ರಮದ ಸ್ಥಳದ ವರೆಗೆ ತಲುಪಿಸಲು ಪ್ರತ್ಯೇಕ ಬಸ್ಸುಗಳು ಮತ್ತು ಟೆಂಪೋ ವ್ಯವಸ್ಥೆ ಮಾಡಲಾಗಿದೆ.