ವರಾಹಿ ಮೂಲ ಯೋಜನೆಯಲ್ಲಿನ ಏತ ನೀರಾವರಿ ಕಾಲುವೆ ವಿಚಾರದಲ್ಲಿ ಬಿಜೆಪಿಯಿಂದ ಅನಗತ್ಯ ರಾಜಕೀಯ – ಕೆ ವಿಕಾಸ್ ಹೆಗ್ಡೆ
ಕುಂದಾಪುರ: ಶೇಕಡಾ 90 ರಷ್ಟು ಕಾಮಗಾರಿ ಮುಗಿದು ಅರಣ್ಯ ಇಲಾಖೆಯ ಅನುಮತಿ ದೊರೆಯದೆ ರೈತರ ಬಹು ವರ್ಷದ ನೀರಿಕ್ಷೆಯ ವರಾಹಿ ಮೂಲ ಯೋಜನೆಯ ಏತ ನೀರಾವರಿ ಕಾಲುವೆ ಕಾಮಗಾರಿ ಹಳ್ಳ ಹಿಡಿಯಲು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಜನಪ್ರತಿನಿದಿನಗಳೆ ನೇರ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪ ಮಾಡಿದ್ದಾರೆ.
ವರಾಹಿ ಏತ ನೀರಾವರಿ ಯೋಜನೆ ಮುಕ್ತಾಯದ ಹಂತದಲ್ಲಿದ್ದು ಈಗ ಕಾಮಗಾರಿ ಇರುವ ಹಂತದಲ್ಲೇ ಸ್ಥಗಿತಗೊಳ್ಳುವ ನೀರಾವರಿ ಇಲಾಖೆಯ ಆದೇಶ ಅದೆಷ್ಟೋ ವರ್ಷಗಳಿಂದ ನೀರಿಗಾಗಿ ಕಾಯುತ್ತಿರುವ ರೈತ ಬಂಧುಗಳಿಗೆ ಬರಸಿಡಿಲು ಬಡಿದಂತಾಗಿದೆ. ಫಲವತ್ತಾದ ಭೂಮಿ ಕಳೆದುಕೊಂಡರೂ ಸಹ ಉಳಿದ ಭೂಮಿಗೆ ಹಾಗೂ ನೀರಿನ ಆಶ್ರಯಕ್ಕಾಗಿ ಕಾಯುತ್ತಿರುವ ಅದೆಷ್ಟೋ ರೈತರಿಗೆ ಹಾಗೂ ಕುಡಿಯುವ ನೀರು ಬಳಕೆದಾರರ ಬಹು ನಿರೀಕ್ಷೆಯ ವರಾಹಿ ಏತ ನೀರಾವರಿ ಹಾದು ಹೋಗುವ ಬಿಲ್ಲಾಡಿ, ಶಿರಿಯಾರ, ಆವರ್ಸೆ, ಮಂದಾರ್ತಿ, ಬ್ರಹ್ಮಾವರ ಮುಂತಾದ ಭಾಗಗಳ ರೈತರಿಗೆ ಅನ್ಯಾಯ ಮಾಡಿದ್ದು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಜನಪ್ರತಿನಿಧಿಗಳು.
ಮಾಹಿತಿಯಂತೆ ವರಾಹಿ ನೀರಾವರಿ ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿ ಈಗಾಗಲೇ ಅರಣ್ಯ ಇಲಾಖೆಯಿಂದ ಅನುಮತಿ ದೊರೆತು ಅವುಗಳ ಸಂಪೂರ್ಣ ಬಳಕೆಯಾಗಿದೆ, ಇನ್ನು ಹೆಚ್ಚುವರಿ ಅರಣ್ಯ ಭೂಮಿಯನ್ನು ಮಂಜೂರು ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಆದರೆ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸುವುದು ರಾಜ್ಯ ಸರ್ಕಾರ ಆದರೆ ಅದೆಷ್ಟೋ ವರ್ಷಗಳಿಂದ ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರು ಬಿಜೆಪಿ ಪಕ್ಷದವರು. ಈಗ ತಮ್ಮ ತಪ್ಪನ್ನು ಮರೆಮಾಚಲು ರೈತರ ಸಭೆಗಳನ್ನು ನಡೆಸಿ ಬಿಜೆಪಿ ಮುಖಂಡರುಗಳು ನಾಟಕ ಮಾಡುತ್ತಿದ್ದಾರೆ.
ಬಿಜೆಪಿ ಮುಖಂಡರುಗಳಿಗೆ ನಿಜವಾಗಿ ಈ ಸಮಸ್ಯೆ ಪರಿಹಾರ ಆಗಬೇಕು ಎಂದಿದ್ದರೆ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖಾ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಲಿ, ಅದನ್ನಾ ಬಿಟ್ಟು ರಾಜ್ಯ ಸರ್ಕಾರ, ಗುತ್ತಿಗೆದಾರರನ್ನು ಬೊಟ್ಟು ಮಾಡುವುದು ಸರಿಯಲ್ಲಾ. ಯೋಜನೆ ಪ್ರಾರಂಭವಾಗಿ ಏಳು ವರ್ಷವಾಗಿದೆ, ಏಳೂ ವರ್ಷಗಳಿಂದ ಇಲ್ಲಿನ ಶಾಸಕರು ಹಾಗೂ ಸಂಸದರು ಬಿಜೆಪಿ ಪಕ್ಷದವರು, ಈ ಸಮಸ್ಯೆಗಳಿಗೆ ಅವರಲ್ಲಿನ ಜನಪರ ಹಾಗೂ ರೈತಪರ ಕಾಳಜಿಯ ಕೊರತೆಯೇ ಕಾರಣ. ಇನ್ನಾದರೂ ಬಿಜೆಪಿ ನಾಯಕರುಗಳು ಬೀದಿ ನಾಟಕ ಮಾಡುವುದನ್ನು ಬಿಟ್ಟು ವರಾಹಿ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
