ಉಪ್ಪಿನಂಗಡಿ: ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಆರೋಪ; ಇಬ್ಬರ ಬಂಧನ
ಉಪ್ಪಿನಂಗಡಿ: ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿಗಳಾದ ಜೈಮುತ್ತಾ (23) ಹಾಗೂ ಮುತ್ತು (28) ಎಂದು ಗುರುತಿಸಲಾಗಿದೆ.
ಸೆ.3ರಂದು ರಾತ್ರಿ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿ ಸಿ.ಹೆಚ್.ಸಿ. 516 ಹಾಗೂ ಪಿ.ಸಿ. 453 ರವಿರಾಜ್ ಅವರು ಬೈಕ್‌ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಡಬ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಮಂಗಳೂರು–ಬೆಂಗಳೂರು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ವೊಂದರ ಸಮೀಪ ಬೊಲೆರೋ ಪಿಕ್‌ಅಪ್ ವಾಹನ ನಿಂತಿರುವುದು ಹಾಗೂ ಅದರ ಪಕ್ಕದಲ್ಲಿ ಮೂವರು ಅನುಮಾನಾಸ್ಪದವಾಗಿ ನಿಂತಿರುವುದು ಗಮನಕ್ಕೆ ಬಂದಿದೆ.
ಪೊಲೀಸರನ್ನು ಕಂಡು ಮೂವರು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಇಬ್ಬರನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಕ್ಯಾನ್‌ನಲ್ಲಿ ತುಂಬಿಸಲಾಗಿದ್ದ ಸುಮಾರು 20 ಲೀಟರ್ ಡೀಸೆಲ್, ಖಾಲಿ ಕ್ಯಾನ್‌ಗಳು, ಡೀಸೆಲ್ ಕಳವಿಗೆ ಬಳಸುತ್ತಿದ್ದ ರಬ್ಬರ್ ಪೈಪ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕ್‌ಅಪ್ ವಾಹನ ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026ರಂತೆ ಬಿಎನ್‌ಎಸ್‌ಎಸ್ 2023ರ ಕಲಂ 35(1)(ಡಿ) ಹಾಗೂ ಬಿಎನ್‌ಎಸ್ 2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
