ಸ್ವಚ್ಛತಾ ಪಖ್ವಾಡಾ 2026ರ ಅಂಗವಾಗಿ NMPAಯಿಂದ ವಿವಿಧ ಸ್ವಚ್ಛತಾ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಗಳು
ಮಂಗಳೂರು, ಸೆಪ್ಟೆಂಬರ್ 2026: ನವ ಮಂಗಳೂರು ಬಂದರು ಪ್ರಾಧಿಕಾರ (NMPA) ವತಿಯಿಂದ ನಡೆಯುತ್ತಿರುವ ಸ್ವಚ್ಛತಾ ಪಖ್ವಾಡಾ 2026ರ ಅಂಗವಾಗಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಅಂಗವಾಗಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಸಾಮೂಹಿಕ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. NMPAಯ ಉಪಾಧ್ಯಕ್ಷೆ ಶ್ರೀಮತಿ ಎಸ್. ಶಾಂತಿ ಅವರ ನೇತೃತ್ವದಲ್ಲಿ ಬಂದರು ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕರರು ಸಸಿ ನೆಡುವ ಕಾರ್ಯದಲ್ಲಿ ಭಾಗವಹಿಸಿದರು.

ಸ್ವಚ್ಛ ಮತ್ತು ಹಸಿರು ಬಂದರು ಪರಿಸರವನ್ನು ರೂಪಿಸುವ NMPAಯ ಬದ್ಧತೆಯನ್ನು ಈ ಕಾರ್ಯಕ್ರಮ ಮತ್ತಷ್ಟು ಬಲಪಡಿಸಿತು.ಇದೇ ಸಂದರ್ಭದಲ್ಲಿ “Clean & Green Mangaluru” ವಿಷಯದ ಕುರಿತು ಜಾಗೃತಿ ಹಾಗೂ ಪ್ರೇರಣಾತ್ಮಕ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಖ್ಯಾತ ಪರಿಸರವಾದಿ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಶ್ರೀ ಮಾಧವ ಉಳ್ಳಾಲ್ ಅವರು ಪರಿಸರ ಸಂರಕ್ಷಣೆ, ಸ್ವಚ್ಛತೆ ಮತ್ತು ಸಮೂಹ ಜವಾಬ್ದಾರಿಯ ಕುರಿತು ಅರಿವು ಮೂಡಿಸಿದರು.
ಅಭಿಯಾನಕ್ಕೆ ಸೃಜನಾತ್ಮಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ನೌಕರರು ಸ್ವಚ್ಛತೆ ಕುರಿತು ನುಕ್ಕಡ್ ನಾಟಕವನ್ನು ಬಂದರು ಆವರಣದಲ್ಲಿ ಪ್ರದರ್ಶಿಸಿದರು. ನಾಟಕದ ಮೂಲಕ ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ದೈನಂದಿನ ಜೀವನದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಅಗತ್ಯದ ಕುರಿತು ಸಂದೇಶ ಸಾರಲಾಯಿತು.
ಈ ಕಾರ್ಯಕ್ರಮಗಳ ಮೂಲಕ NMPA ತನ್ನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಿತಾಸಕ್ತಿದಾರರಲ್ಲಿ ಸ್ವಚ್ಛತೆ ಮತ್ತು ಪರಿಸರ ಜಾಗೃತಿಯ ಸಂಸ್ಕೃತಿಯನ್ನು ಬೆಳೆಸುವ ತನ್ನ ನಿರಂತರ ಪ್ರಯತ್ನವನ್ನು ಮುಂದುವರಿಸಿದೆ. “ಸ್ವಚ್ಛ ಬಂದರು – ಹಸಿರು ಬಂದರು – ಆರೋಗ್ಯಕರ ಬಂದರು” ಎಂಬ ಆಶಯವನ್ನು ಸಾಕಾರಗೊಳಿಸುವತ್ತ NMPA ಬದ್ಧವಾಗಿದೆ.