ಪರ್ಯಾಯ ಮೆರವಣಿಗೆಯಲ್ಲಿ ಭಗವಾಧ್ವಜ ವಿವಾದದ ಬಗ್ಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮೌನವೇಕೆ?: ದಿನೇಶ್ ಅಮೀನ್
ಉಡುಪಿ: ಪರ್ಯಾಯ ಮಹೋತ್ಸವದ ಮೆರವಣಿಗೆಗೆ ಭಗವಾಧ್ವಜ ಹಾರಿಸಿ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ 3 ದಿನಗಳು ಕಳೆದರೂ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತ್ರ ಈ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡದೆ ದಿವ್ಯ ಮೌನ ವಹಿಸಿರುವುದು ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಪರೋಕ್ಷ ಬೆಂಬಲ ಸೂಚಿಸಿದಂತಿದೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಹೇಳಿದ್ದಾರೆ.
ರಾಜ್ಯದ ಯಾವುದೇ ಮೂಲೆಯಲ್ಲಿ ಸಣ್ಣ ಘಟನೆ ನಡೆದಾಗಲೂ ಎದ್ದು ಬಿದ್ದು ಪತ್ರಿಕಾ ಹೇಳಿಕೆ ನೀಡುವ ರಮೇಶ್ ಕಾಂಚನ್, ಈ ವಿವಾದದ ಬಗ್ಗೆ ಗಾಡ ಮೌನ ತಾಳುವ ಮೂಲಕ ಹಿಂದೂಗಳ ಪವಿತ್ರ ಭಗವಾಧ್ವಜದ ಬಗ್ಗೆ ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷದಲ್ಲಿ ಧ್ವನಿ ಎತ್ತುವ ಹಕ್ಕು ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದೂಗಳಿಗೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಮಠ, ಮಂದಿರ, ದೇವಸ್ಥಾನಗಳ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಕೇಸರಿ ಶಾಲು ಧರಿಸಿ ಹಿಂದುತ್ವದ ನಾಯಕನಂತೆ ಪೋಸ್ ನೀಡಿ, ಫೇಸ್ ಬುಕ್ ನಲ್ಲಿ ಪ್ರಚಾರ ಗಿಟ್ಟಿಸುವ ರಮೇಶ್ ಕಾಂಚನ್ ರಿಗೆ ಇದೀಗ ತಮ್ಮದೇ ಪಕ್ಷದ ಕಾನೂನು ವಿಭಾಗ ಭಗವಾ ಧ್ವಜ ಹಾರಿಸಿದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದರೂ, ಅದನ್ನು ವಿರೋಧಿಸುವ ಹೇಳಿಕೆ ನೀಡಲು ಭಯಪಡುವ ದುಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯವಾಗಿದೆ.
ಇನ್ನಾದರೂ ಓರ್ವ ಜನಪ್ರತಿನಿಧಿಯಾಗಿ, ಶೀರೂರು ಪರ್ಯಾಯದ ಸ್ವಾಗತ ಸಮಿತಿಯ ಸಂಚಾಲಕನಾಗಿ ಪತ್ರಿಕಾಗೋಷ್ಠಿಯಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಜಾತ್ಯಾತೀತತೆಯ ಬಗ್ಗೆ ಗಂಟೆ ಗಟ್ಟಲೆ ಭಾಷಣ ಬಿಗಿಯುವ ರಮೇಶ್ ಕಾಂಚನ್ ಹಿಂದೂಗಳ ಪವಿತ್ರ ಭಗವಾಧ್ವಜ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ, ಇಲ್ಲವೇ ಕಾಂಗ್ರೆಸ್ ಪಕ್ಷದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗೆ ಯಾವುದೇ ಸ್ವಾತಂತ್ರ್ಯ ಇಲ್ಲ ಎಂಬುದನ್ನು ಬಹಿರಂಗವಾಗಿ ಹಿಂದೂ ಸಮಾಜಕ್ಕೆ ತಿಳಿಸಲಿ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
