ಅನವುಗುಂಡಿಯಲ್ಲಿ ಪತ್ನಿ, ಅತ್ತೆಗೆ ಚೂರಿಯಿಂದ ಇರಿತ : ಪರಾರಿಯಾಗಿದ್ದ ಆರೋಪಿ ಪೊಲೀಸರ ವಶಕ್ಕೆ
ಮಂಗಳೂರು: ಪೆರುವಾಜೆ ಗ್ರಾಮದ ಕಾನಾವು ಸಮೀಪದ ಅನವುಗುಂಡಿಯಲ್ಲಿ ಪತ್ನಿ ಹಾಗೂ ಅತ್ತೆಗೆ ಚೂರಿಯಿಂದ ಇರಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅತ್ತೆ ಕುಸುಮ ಹಾಗೂ ಪತ್ನಿ ವಿನುತಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನವುಗುಂಡಿ ನಿವಾಸಿ ಗಣೇಶ ಎಂಬಾತ ಕೃತ್ಯ ಎಸಗಿದ ಆರೋಪಿ. ಗಣೇಶ ಸಾಮಾನ್ಯವಾಗಿ ಪತ್ನಿಯ ಮನೆಯಲ್ಲೇ ವಾಸವಾಗಿದ್ದು, ತನ್ನ ಸ್ವಂತ ಮನೆಗೆ ಅಪರೂಪಕ್ಕೊಮ್ಮೆ ಬರುತ್ತಿದ್ದ ಎನ್ನಲಾಗಿದೆ. ಅವರ ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ತಂದೆ ಮಾತ್ರ ಮನೆಯಲ್ಲಿ ವಾಸವಾಗಿದ್ದರು.
ಸೆ.6ರಂದು ಗಣೇಶ ಪತ್ನಿ ವಿನುತಾ ಹಾಗೂ ಸಂಬಂಧಿಕರೊಂದಿಗೆ ಬೆಳ್ಳಾರೆಯಿಂದ ರಿಕ್ಷಾದಲ್ಲಿ ಅನವುಗುಂಡಿಯ ಮನೆಗೆ ಬಂದಿದ್ದ ಎನ್ನಲಾಗಿದೆ. ಮನೆಯಲ್ಲಿ ಸುಮಾರು ಅರ್ಧ ಗಂಟೆ ಇದ್ದ ಬಳಿಕ ಪತ್ನಿ, ಅತ್ತೆ, ಪುತ್ರ ಹಾಗೂ ಸಂಬಂಧಿಕರೊಂದಿಗೆ ಪುನಃ ಪತ್ನಿಯ ಮನೆಗೆ ಹೊರಟಿದ್ದರು.
ಮನೆಯಿಂದ ಹೊರಟು ರಸ್ತೆಗೆ ತಲುಪಿದಾಗ ಗಣೇಶ ಪತ್ನಿ ವಿನುತಾ ಅವರಿಗೆ ಚೂರಿಯಿಂದ ಇರಿಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಅತ್ತೆ ಕುಸುಮ ಅಡ್ಡ ಬಂದಿದ್ದು, ಅವರಿಗೆ ಚೂರಿ ಇರಿತವಾಗಿ ಗಂಭೀರ ಗಾಯವಾಗಿದೆ. ಬಳಿಕ ವಿನುತಾ ಅವರಿಗೂ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.
ಘಟನೆ ಸಂದರ್ಭ ಆರೋಪಿಯ ಪುತ್ರ ಹಾಗೂ ಸಂಬಂಧಿಕರು ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ಬಳಿಕ ಗಣೇಶ ಮನೆ ಸಮೀಪದ ಕಾಡಿನತ್ತ ಪರಾರಿಯಾಗಿದ್ದ. ಘಟನೆಯ ಮಾಹಿತಿ ತಿಳಿದು ಬೆಳ್ಳಾರೆ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಸಂಜೆ ವೇಳೆ ಕಾಡಿನಲ್ಲಿ ಗಣೇಶ ಪತ್ತೆಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
