ವಿಶ್ವ ಪರಿಸರ ದಿನಾಚರಣೆ: ಮೊಬೈಲ್ ಬಿಡಿ, ಗಿಡ ನೆಡಿ – ಗೀತಾ ವಾಗ್ಳೆ ಕರೆ
ಕಾಪು: ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿಲ್ಲಾ ಪಂಚಾಯತ್ ಉಡುಪಿ, ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪೆನಿ (ನಿ) ಹಾಗೂ ಕಾಪು ತಾಲೂಕಿನ ಅಡ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಗುರು ಇಕೋ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಅಡ್ವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಚರಿಸಲಾಯಿತು.
ಉಡುಪಿ ಜಿಲ್ಲಾ ಪಂಚಾಯತ್ ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕರಾದ ಡಾ. ಸೌಮ್ಯಾ ಅವರು ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ದೊಡ್ಡ ಜವಾಬ್ದಾರಿ ಇಂದು ಪ್ರತಿಯೊಬ್ಬರ ಮೇಲಿದೆ. ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಪರಿಶುದ್ಧವಾಗಿರಬೇಕಾದರೆ ನಮ್ಮ ಸುತ್ತಲಿನ ಪರಿಸರವನ್ನು ಉಳಿಸಿಕೊಳ್ಳುವುದು ಅಗತ್ಯ. ಗಿಡ-ಮರಗಳು ಕೇವಲ ಮಾನವರಿಗೆ ಮಾತ್ರವಲ್ಲದೆ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಅವಶ್ಯಕವಾಗಿದ್ದು, ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಮಹಿಳಾ ಕಿಸಾನ್ ಉತ್ಪಾದಕರ ಕಂಪೆನಿ (ಎಂಕೆಪಿಸಿ) ನಿರ್ದೇಶಕಿ ಗೀತಾ ವಾಗ್ಳೆ ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಬಳಕೆಯ ಚಟ ಹೆಚ್ಚುತ್ತಿರುವುದರಿಂದ ಇತರ ಹವ್ಯಾಸಗಳು ಕಡಿಮೆಯಾಗುತ್ತಿವೆ. ಆರೋಗ್ಯಕರ ಬದುಕಿಗಾಗಿ ಪರಿಸರವನ್ನು ಹಸಿರಾಗಿಸುವುದು ಅಗತ್ಯವಾಗಿದ್ದು, ಗಿಡ-ಮರಗಳನ್ನು ಹೆಚ್ಚು ಬೆಳೆಸುವ ಹಾಗೂ ಸಂರಕ್ಷಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. “ಮೊಬೈಲ್ ಬಿಡಿ – ಗಿಡ ನೆಡಿ – ಪಾಠದತ್ತ ಗಮನ ಕೊಡಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಕವಿತಾ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪರಿಸರ ಸಂರಕ್ಷಣೆಯ ಕುರಿತ ಕಂಪೆನಿಯ ಕಾಳಜಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಕೆಪಿಸಿ ಅಧ್ಯಕ್ಷೆ ಉಷಾ ಎನ್. ವಹಿಸಿದ್ದರು. ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ “ಏಕ್ ಪೇಡ್ ಮಾ ಕೇ ನಾಮ್” ಯೋಜನೆ ಎಲ್ಲೆಡೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಶಿಕ್ಷಕ ವೃಂದ ಹಾಗೂ ಎಂಕೆಪಿಸಿ ನಿರ್ದೇಶಕರಾದ ಪವಿತ್ರಾ ಗಿರೀಶ್, ಕವಿತಾ, ಕಸ್ತೂರಿ, ಮಮತಾ ವಾಗ್ಳೆ, ಕಂಪೆನಿಯ ಲೆಕ್ಕಾಧಿಕಾರಿ ಸುಶ್ಮಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಂಪೆನಿಯ ಕಾರ್ಯನಿರ್ವಾಹಣಾಧಿಕಾರಿ ರೀನಾ ಹೆಗ್ಡೆ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
