Home Mangalorean News Kannada News ವಿಶ್ವಪ್ರಸಿದ್ಧ ಮಟ್ಟು ಗುಳ್ಳ ಮಾದರಿ ಧ್ವಂಸ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ವಿಶ್ವಪ್ರಸಿದ್ಧ ಮಟ್ಟು ಗುಳ್ಳ ಮಾದರಿ ಧ್ವಂಸ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Spread the love

ವಿಶ್ವಪ್ರಸಿದ್ಧ ಮಟ್ಟು ಗುಳ್ಳ ಮಾದರಿ ಧ್ವಂಸ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಉಡುಪಿ: ವಿಶ್ವಪ್ರಸಿದ್ಧ ಮಟ್ಟು ಗುಳ್ಳ ಮಾದರಿ ಧ್ವಂಸ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರುವಿಶ್ವಪ್ರಸಿದ್ಧ “ಮಟ್ಟು ಗುಳ್ಳ” ಕೇವಲ ಒಂದು ಬೆಳೆ ಅಥವಾ ತರಕಾರಿ ಮಾತ್ರವಲ್ಲದೆ, ಮಟ್ಟು ಗ್ರಾಮದ ಹೆಮ್ಮೆ, ಕರಾವಳಿಯ ಸಂಸ್ಕೃತಿ, ರೈತರ ಪರಿಶ್ರಮ ಹಾಗೂ ಶ್ರೀ ಕ್ಷೇತ್ರ ಸೋದೆ ಶ್ರೀ ವಾದಿರಾಜ ಸ್ವಾಮೀಜಿಯವರ ಪವಿತ್ರ ಪ್ರಸಾದದ ನೆನಪನ್ನು ಹೊತ್ತ ಅಮೂಲ್ಯ ಪರಂಪರೆಯಾಗಿದೆ.

ದೇಶ–ವಿದೇಶಗಳಲ್ಲಿಯೂ ವಿಶೇಷ ಗುರುತನ್ನು ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವದ ಪ್ರತೀಕವಾಗಿ ಗುರುತಿಸಿಕೊಂಡಿದೆ. ಈ ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಮೇಲಿನ ಅಭಿಮಾನ ಹಾಗೂ ಪ್ರೀತಿಯಿಂದ ದಾನಿ ಸುಭಾಷ್ ಎಂ. ಸಾಲಿಯನ್ ನೆಲ್ಲಿಕಟ್ಟೆ ಅವರು “I LOVE MATTU” ವಿನ್ಯಾಸದೊಂದಿಗೆ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ನಿರ್ಮಿಸಿ ಗ್ರಾಮಕ್ಕೆ ಸಮರ್ಪಿಸಿದ್ದರು. ಈ ವಿನ್ಯಾಸವು ಪ್ರವಾಸಿಗರು ಹಾಗೂ ಯುವಜನರಿಗೆ ಮಟ್ಟು ಗ್ರಾಮದ ಗುರುತಾಗಿ ಪರಿಣಮಿಸಿತ್ತು.

ಇತ್ತೀಚೆಗೆ ಕೆಲ ದುಷ್ಕರ್ಮಿಗಳು ರಾತ್ರಿ ವೇಳೆ ಈ ಮಾದರಿಯನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಇದು ಕೇವಲ ಒಂದು ಮಾದರಿಯ ಮೇಲಿನ ಹಾನಿಯಲ್ಲ; ಮಟ್ಟು ಗ್ರಾಮದ ಗೌರವ, ರೈತರ ಭಾವನೆ ಮತ್ತು ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯವಾಗಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಈ ಹೇಯ ಕೃತ್ಯವನ್ನು ಮಟ್ಟು ಗುಳ್ಳ ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸಿದ್ದು, ಗ್ರಾಮಸ್ಥರು ಮತ್ತು ರೈತರ ಮನಸ್ಸಿಗೆ ನೋವುಂಟುಮಾಡಿರುವ ತಪ್ಪಿತಸ್ಥರನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.


Spread the love

Exit mobile version