ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ
ಮಂಗಳೂರು: ದ.ಕ. ಮಂಗಳೂರು ಜಿಲ್ಲಾ ವೇಗವಾದ ವಿಶೇಷ ನ್ಯಾಯಾಲಯ (ಪಾಕ್ಸೊ) ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಮರಣದಂಡನೆ ಸೇರಿದಂತೆ ಗಂಭೀರ ಶಿಕ್ಷೆಯನ್ನು ವಿಧಿಸಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ 2024ರ ಆಗಸ್ಟ್ 6ರಂದು ಬೆಳಿಗ್ಗೆ 9ರಿಂದ 9.15ರ ನಡುವೆ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು, ಹಂಚಿನಾಳ ಗ್ರಾಮದ ನಿವಾಸಿ ಫಕ್ಕೀರಪ್ಪ ಹಣಮಪ್ಪ ಮಾದರ (51) ವಿರುದ್ಧ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿಯು ಬಾಲಕಿ ವಾಸವಿದ್ದ ಬಾಡಿಗೆ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಕೊಲೆ ಮಾಡಿದ ಬಗ್ಗೆ ತನಿಖೆಯಲ್ಲಿ ದೃಢಪಟ್ಟಿತ್ತು.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 89/2024 ಅಡಿಯಲ್ಲಿ ಪ್ರಕರಣ ದಾಖಲಾಗಿ, ಬಿ.ಎನ್.ಎಸ್ ಕಾಯ್ದೆಯ ಕಲಂ 103(1), 332(ಎ) ಮತ್ತು ಪಾಕ್ಸೊ ಕಾಯ್ದೆಯ ಕಲಂ 4(2) ರಂತೆ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ಟಿಎಸ್ಸಿ-2 ಪಾಕ್ಸೊ) ವಿಚಾರಣೆ ನಡೆಸಿ, ಆರೋಪಿತನು ಅಪರಾಧ ಎಸಗಿರುವುದು ಸಾಬೀತಾಗಿದ್ದು, ಕೆಳಗಿನಂತೆ ಶಿಕ್ಷೆ ವಿಧಿಸಿದೆ:
ಕಲಂ 4(2) ಪಾಕ್ಸೊ ಕಾಯ್ದೆ (ಲೈಂಗಿಕ ದೌರ್ಜನ್ಯ): ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ರೂ. 50,000 ದಂಡ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 4 ತಿಂಗಳ ಜೈಲು ಶಿಕ್ಷೆ.
ಕಲಂ 332(ಎ) ಬಿ.ಎನ್.ಎಸ್ (ಅಪರಾಧಿಕ ಆಕ್ರಮಣ): ರೂ. 50,000 ದಂಡ. ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 4 ತಿಂಗಳ ಜೈಲು ಶಿಕ್ಷೆ.
ಆರೋಪಿ ಜಾಮೀನು ಸಿಗದೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿಚಾರಣಾ ಬಂದಿಯಾಗಿದ್ದು, ಕೇವಲ 1 ವರ್ಷ 1 ತಿಂಗಳೊಳಗೆ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟವಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಅನುಪಮ್ ಅಗರವಾಲ್, ಐಪಿಎಸ್, ಉಪ ಆಯುಕ್ತರು ಸಿದ್ದಾರ್ಥ್ ಗೋಯಲ್ (ಕಾನೂನು-ಸುವ್ಯವಸ್ಥೆ), ಬಿ.ಪಿ. ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ಹಾಗೂ ಸಹಾಯಕ ಆಯುಕ್ತ ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಲ್ಲಿ, ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಪ್ರಕರಣವನ್ನು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆಯ ಸಮಯದಲ್ಲಿ ಕೋರ್ಟ್ ಮಾನಿಟರಿಂಗ್ ಜವಾಬ್ದಾರಿಯನ್ನು ಮಿಥುನ್ ಹೆಚ್.ಎನ್., ಐಪಿಎಸ್ (ಡಿ.ಸಿ.ಪಿ ಕಾನೂನು-ಸುವ್ಯವಸ್ಥೆ) ಮತ್ತು ಕೆ. ರವಿಶಂಕರ್ (ಡಿ.ಸಿ.ಪಿ ಅಪರಾಧ-ಸಂಚಾರ) ನಿರ್ವಹಿಸಿದರು. ಪಿ.ಎಸ್.ಐ.ಗಳಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ, ಹೆಡ್ ಕಾನ್ಸ್ಟೇಬಲ್ಗಳು ಮತ್ತು ಸಿಪಾಯಿಗಳ ಸಹಕಾರದಿಂದ ತನಿಖೆ ಯಶಸ್ವಿಯಾಗಿ ಪೂರ್ಣಗೊಂಡಿತು.
ರಾಜ್ಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸಹನಾದೇವಿ ವಾದ ಮಂಡಿಸಿ, ಆರೋಪಿಗೆ ಗಂಭೀರ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾದರು.
2024ರ ಆಗಸ್ಟ್ 6ರಂದು ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಆರೋಪಿಯು ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಕೊಲೆ ಮಾಡಿದ ಘಟನೆ ರಾಜ್ಯದಾದ್ಯಂತ ಆಕ್ರೋಶ ಹುಟ್ಟಿಸಿತ್ತು. ಕಾನೂನು ರಕ್ಷಣಾ ವ್ಯವಸ್ಥೆ ತ್ವರಿತವಾಗಿ ಪ್ರತಿಕ್ರಿಯಿಸಿ ಕೇವಲ ಒಂದು ವರ್ಷದ ಒಳಗೆ ಪ್ರಕರಣಕ್ಕೆ ಅಂತಿಮ ತೀರ್ಪು ನೀಡಿದೆ.