ಮಂಗಳೂರು: ಫಾದರ್ ಮುಲ್ಲರ್ ನರ್ಸಿಂಗ್ ಹಾಗೂ ಸ್ಪೀಚ್ & ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ
ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಂಗ ಸಂಸ್ಥೆಗಳಾದ ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಫಾದರ್ ಮುಲ್ಲರ್ ಸ್ಪೀಚ್ ಅಂಡ್ ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ಶನಿವಾರ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗಣ್ಯ ಅತಿಥಿಗಳು, 226 ಪದವೀಧರರು, ಅಧ್ಯಾಪಕರು, ಪೋಷಕರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪದವೀಧರ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದ ಶೈಕ್ಷಣಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಂಸ್ಥಾಪಕರಾದ ರೆವ. ಫಾ. ಆಗಸ್ಟಸ್ ಮುಲ್ಲರ್ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ನಿವೃತ್ತ ಆರ್ಚ್‌ಬಿಷಪ್ ಅತಿ ವಂದನೀಯ ಡಾ. ಬರ್ನಾರ್ಡ್ ಮೊರಾಸ್ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ್ ಆರೋಗ್ಯ ವೃತ್ತಿಪರರ ಕಾಲೇಜು (MAHE) ಯ ಮಾಜಿ ಅಸೋಸಿಯೇಟ್ ಡೀನ್ ಡಾ. ವೆಂಕಟರಾಜ ಐತಾಳ್ ಯು. ಹಾಗೂ ಭುವನೇಶ್ವರದ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫೌಸ್ಟಿನ್ ಲೂಕಾಸ್ ಲೋಬೋ, ಆಡಳಿತಾಧಿಕಾರಿಗಳಾದ ವಂದನೀಯ ಡಾ. ಮೈಕೆಲ್ ಎಲ್. ಸಾಂತುಮಾಯೋರ್, ವಂದನೀಯ ಫಾ. ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ ಕುಮಾರ್ ಕೆ, ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಡಾ. ಧನ್ಯ ದೇವಸ್ಯ ಹಾಗೂ ಪ್ರೊ. ಸಿಂಥಿಯಾ ಸಾಂತುಮಾಯೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.