ಶಿರ್ವ: ದ್ವಿಚಕ್ರ ವಾಹನ ಕಳವು ಪ್ರಕರಣ – ಆರೋಪಿ ಬಂಧನ, ಐದು ದ್ವಿಚಕ್ರ ವಾಹನ ವಶ
ಉಡುಪಿ: ಬಂಟಕಲ್ಲು ಮದ್ವವಾದಿರಾಜ ಇಂಜಿನೀಯರಿಂಗ್ ಕಾಲೇಜು ಸಮೀಪ ನಡೆದ ಸ್ಕೂಟರ್ ಕಳವು ಪ್ರಕರಣವನ್ನು ಶಿರ್ವ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಓಂ ಕೋಲಾರ ಎಂದು ಗುರುತಿಸಲಾಗಿದೆ
ಗುಣವತಿ ಎಂಬವರ ಪುತ್ರ ಕೌಶಿಕ್ ಅವರು ಡಿಸೆಂಬರ್ 5 ರಂದು ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಬಂಟಕಲ್ಲು ಮದ್ವವಾದಿರಾಜ ಇಂಜಿನೀಯರಿಂಗ್ ಕಾಲೇಜಿಗೆ ತೆಗೆದುಕೊಂಡು ಹೋಗಿದ್ದರು. ಮಧ್ಯಾಹ್ನ 12.45ರ ಸುಮಾರಿಗೆ ಕಾಲೇಜಿನ ಊಟದ ಸಮಯದಲ್ಲಿ ಬಂಟಕಲ್ಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಸ್ಕೂಟರ್ ಪಾರ್ಕಿಂಗ್ ಮಾಡಿ ಊಟ ಮುಗಿಸಿ ಮಧ್ಯಾಹ್ನ 1.15ರ ಸುಮಾರಿಗೆ ಮರಳಿ ಬಂದಾಗ ಸ್ಕೂಟರ್ ಕಳವಾಗಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವಾದ ಸ್ಕೂಟರ್ನ ಅಂದಾಜು ಮೌಲ್ಯ ಸುಮಾರು ₹60,000 ಎಂದು ತಿಳಿಸಲಾಗಿದೆ.
ಈ ಪ್ರಕರಣದ ಪತ್ತೆಗೆ ಶಿರ್ವ ಪೊಲೀಸ್ ಠಾಣೆಯಿಂದ ವಿಶೇಷ ತಂಡವನ್ನು ರಚಿಸಿ ಉಡುಪಿ, ಮಲ್ಪೆ, ಕಾರ್ಕಳ ಹಾಗೂ ಧರ್ಮಸ್ಥಳ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಓಂ ಕೋಲಾರ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆಯ ವೇಳೆ ಆರೋಪಿಯಿಂದ ಶಿರ್ವ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಂದು ದ್ವಿಚಕ್ರ ವಾಹನ ಸೇರಿದಂತೆ ಕಾಪು ಹಾಗೂ ಬೆಂಗಳೂರು ನಗರದಲ್ಲಿನ ವಿವಿಧ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜಮತ್ ಅಲಿ ಅವರ ಮೇಲ್ವಿಚಾರಣೆಯಲ್ಲಿ ಶಿರ್ವ ಪೊಲೀಸ್ ಠಾಣಾಧಿಕಾರಿಗಳ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್. ಹಾಗೂ ಸಿಬ್ಬಂದಿಗಳಾದ ಮಂಜುನಾಥ ಅಡಿಗ, ದಯಾನಂದ ಪ್ರಭು, ಅನ್ವರ್ ಅಲಿ, ಸಿದ್ದರಾಯಪ್ಪ, ಮಂಜುನಾಥ ಹೊಸಮನಿ, ಕಿರಣ್, ಶಿವಾನಂದಪ್ಪ ಮತ್ತು ಬಸವರಾಜ್ ಭಾಗವಹಿಸಿದ್ದರು.