ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ – ಆರೋಪಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ
ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಸತ್ತಾರ್ ಗೆ ನ್ಯಾಯಾಲಯವು ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿದೆ. ದಂಡವನ್ನು ಪಾವತಿಸದಿದ್ದಲ್ಲಿ ಇನ್ನೊಂದು ತಿಂಗಳ ಹೆಚ್ಚುವರಿ ಕಾರಾವಾಸವನ್ನು ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಈ ಘಟನೆ 25-04-2022 ರಂದು ಸಂಭವಿಸಿತ್ತು. ಸುಳ್ಯದಿಂದ ಪುತ್ತೂರಿಗೆ ಹೊರಟಿದ್ದ ಬಸ್‌ನಲ್ಲಿ ಯುವತಿಯ ಪಕ್ಕದಲ್ಲಿ ಕುಳಿತಿದ್ದ ಆರೋಪಿಯು ಕಿರುಕುಳ ನೀಡಿದ ಪ್ರಕರಣ ದಾಖಲಾಯಿತು. ತನಿಖಾಧಿಕಾರಿಗಳಾಗಿ ಪುತ್ತೂರು ನಗರ ಠಾಣೆಯ ಪಿಎಸ್‌ಐ ರಾಜೇಶ್ ಕೆ.ವಿ. ಅವರು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸದರಿ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಹಾಗೂ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ ಅವರು ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಸಹಾಯಕ ಸಾರ್ವಜನಿಕ ಅಭಿಯೋಜಕಿ ಕವಿತಾ ಕೆ. ವಾದ ಮಂಡಿಸಿದ್ದರು.