Home Mangalorean News Kannada News ನಾವು ನಮ್ಮದು ಭಾವನೆಯನ್ನು ಬೆಳೆಸಿಕೊಳ್ಳಿ -ಡಾ.ಡಿ.ವೀರೇಂದ್ರ ಹೆಗ್ಗಡೆ

ನಾವು ನಮ್ಮದು ಭಾವನೆಯನ್ನು ಬೆಳೆಸಿಕೊಳ್ಳಿ -ಡಾ.ಡಿ.ವೀರೇಂದ್ರ ಹೆಗ್ಗಡೆ

Spread the love

ನಾವು ನಮ್ಮದು ಭಾವನೆಯನ್ನು ಬೆಳೆಸಿಕೊಳ್ಳಿ -ಡಾ.ಡಿ.ವೀರೇಂದ್ರ ಹೆಗ್ಗಡೆ

ಹುಬ್ಬಳ್ಳಿ: ಶಕ್ತಿ ಮೂಲಗಳಾದ ಸೂರ್ಯ, ವರುಣ, ವಾಯು, ಅಗ್ನಿ, ಆಕಾಶ, ಭೂಮಿ ಇವೇ ಮೊದಲಾದವುಗಳು ಬೇದ-ಭಾವ ಮಾಡದೆ ಭೂಮಂಡಲದ ಸಮಸ್ಥರಿಗೂ ಒಳಿತನ್ನೇ ಮಾಡುತ್ತವೆ. ಸಕಲರಿಗೂ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಗಿದೆ. ನಾನು, ನನ್ನದು ಎಂಬ ಸ್ವಾರ್ಥ ಭಾವವನ್ನು ತೊರೆದು ನಾವು, ನಮ್ಮದು ಎಂಬ ಭಾವನೆಯನ್ನು ಸರ್ವರೂ ಬೆಳೆಸಿಕೊಂಡಾಗಲೇ ಮನುಕುಲದ ಉದ್ಧಾರ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.

ಅವರು ನಗರದ ಅಮರಗೋಳ ಎ.ಪಿ.ಎಂ.ಸಿ. ವಿವಿದೋದ್ಧೇಶ ವಾಣಿಜ್ಯ ಸಂಕಿರಣದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ, ಹುಬ್ಬಳ್ಳಿ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ನವನಗರ ವಲಯ ಇವುಗಳ ವತಿಯಿಂದ ನಡೆಸಲಾದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಹಾಗೂ ಒಕ್ಕೂಟಗಳ ಸಾಧನಾ ಸಮಾವೇಶವನ್ನುದ್ಧೇಶಿಸಿ ಮಾತನಾಡುತ್ತಿದ್ದರು.

ಕಷ್ಟ ಬಂತು ಎಂಬ ಕಾರಣಕ್ಕೆ ಸಂಘ ಬಿಡುವವರಿದ್ದಾರೆ. ಸಂಘ ಇರುವುದು ಕಷ್ಟ ಪರಿಹಾರಕ್ಕಾಗಿ ಹೊರತು ಕಷ್ಟ ಬಂದಾಗ ಸಂಘದಿಂದ ಹೊರನಡೆಯುವುದಲ್ಲ. ಸಾವಿರಾರು ಜನ ತಾವು ಕಟ್ಟಿಕೊಂಡ ಸಂಘದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಸಂಘಟಿತರಾಗಿ ನಾವು ದುಡಿದಾಗ ಜೀವನದಲ್ಲಿ ಯಶಸ್ಸು ಸುಲಭವಾಗಿ ಲಭಿಸುತ್ತದೆ. ಸ್ವಸಹಾಯ ಸಂಘದ ಸದಸ್ಯರಾಗಿದ್ದ ಅನೇಕ ಮಹಿಳೆಯರು ಇಂದು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದ ಉದಾಹರಣೆಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಧರ್ಮ ಪಾಲನೆಯಿಂದ ನಮ್ಮ ಅಂತಃಶಕ್ತಿ ವೃದ್ಧಿಸುತ್ತದೆ. ಹಬ್ಬ ಹರಿದಿನಗಳು, ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಚೈತನ್ಯವನ್ನು ಹೆಚ್ಚಿಸಿ ನಮ್ಮ ಸಾಧನೆಗೆ ಉತ್ತೇಜನ ನೀಡುತ್ತವೆ. ನಾನು ನನ್ನದೆಂಬ ಮಮಕಾರ ಹೋಗಿ ನಾವೆಲಾ ಒಂದು, ಇನ್ನೊಬ್ಬರ ಕಷ್ಟ ನಮ್ಮದೆ ಎಂದು ತಿಳಿದು ಮಾನವೀಯ ನೆಲೆಯಲ್ಲಿ ಸ್ಪಂದಿಸಿದಾಗದೇವರು ನಮ್ಮ ದೌರ್ಬಲ್ಯವನ್ನು ನಿವಾರಿಸಿ ಯಶಸ್ಸಿಗೆ ಬೇಕಾದ ಶಕ್ತಿ ನೀಡುತ್ತಾನೆ ಎಂದರು.

ಸ್ವಚ್ಛತೆಗೆ ನಾವೆಲ್ಲಾ ಪ್ರಾಧಾನ್ಯತೆ ನೀಡಬೇಕು. ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ಚಡಪಡಿಸುವ ಬದಲು ಎಲ್ಲರೂ ಪರಿಸರವನ್ನು ಸ್ವಚ್ಛ ಇರಿಸುವ ಮೂಲಕ ಕಾಯಿಲೆ ಬಾರದಂತೆ ನೋಡಿಕೊಳ್ಳುವುದು ಬುದ್ದಿವಂತಿಕೆ. ಇದಕ್ಕಾಗಿ ಸ್ವಸಹಾಯ ಸಂಘಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು ಇದು ಪರಿಣಾಮ ಬೀರಿದೆ ಎಂಬುದಕ್ಕೆ ಜನರಲ್ಲಿ ಉಂಟಾದ ಸ್ವಚ್ಛತೆಯ ಬಗೆಗಿನ ಕಾಳಜಿಯೇ ಸಾಕ್ಷಿ ನಾವೆಲ್ಲಾ ಸ್ವಚ್ಛತೆಯತ್ತ ಸಾಗೋಣ ಎಂಬ ಸಂದೇಶವನ್ನು ನೀಡಿದರು.ಈ ದೇಶ ನಮ್ಮದು ಎಂಬ ಭಕ್ತಿಯಿಂದ ಉತ್ತರಕರ್ನಾಟಕ ಭಾಗದ ಹೆಚ್ಚಿನ ಯುವಕರು ದೇಶ ಸೇವೆಗಾಗಿ ಸೈನ್ಯಕ್ಕೆ ಸೇರಿದ್ದಾರೆ. ಸೈನಿಕರು ನಮ್ಮೆಲ್ಲರ ರಕ್ಷಣೆಗಾಗಿ ತಮ್ಮ ದೇಹ ತ್ಯಾಗಕ್ಕೂ ಸದಾಸಿದ್ದರಾಗಿರುತ್ತಾರೆ. ಅವರು ನಮಗೆ ಸ್ಪೂರ್ತಿಯಾಗಬೇಕು. ದೇಶ ಭಕ್ತಿ ನಮ್ಮ ಮೂಲ ಮಂತ್ರವಾಗಬೇಕು ಎಂಬುದಾಗಿ ಕರೆ ನಿಡದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತರಕರ್ನಾಟಕ ಭಾಗಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂಬುದಾಗಿ ಹೆಗ್ಗಡೆಯವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.

sathyanarayana-pooja-dharmastala-00

ಮಹಾಪೌರ ಮಂಜುಳಾ ಅಕ್ಕೂರ ಮಾತನಾಡಿ, ನಾನು ಹಿಂದೆ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದೆ. ಕೂಲಿ ಕೆಲಸ ಮಾಡುತ್ತಿದ್ದ ನನಗೆ ಉಳಿತಾಯದ ಬಗ್ಗೆ ಅರಿವು ಮೂಡಿಸಿದ್ದೇ ಸ್ವಸಹಾಯ ಸಂಘ. ಮಂಜುನಾಥ ಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಮಹಾಪೌರಳಾಗಿದ್ದೇನೆ ಎಂದರು.

ಸಭೆಯ ಪೂರ್ವದಲ್ಲಿ 2001 ಸಾಮೂಹಿಕಶ್ರೀ ಸತ್ಯನಾರಾಯಣ ಪೂಜೆಗಳು ನೆರವೇರಿದ್ದು ಪೂಜಾ ಕಾರ್ಯಕ್ರಮಕ್ಕೆ ಶ್ರೀಮತಿ ಪದ್ಮಲತಾ ನಿರಂಜನ್‍ಕುಮಾರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಉತ್ತಮ ಸಾಧನೆ ಮಾಡಿದ ವಿವಿಧ ಒಕ್ಕೂಟಗಳಿಗೆ, ಸಂಘಗಳಿಗೆ ಹೆಗ್ಗಡೆಯವರು ಸ್ಮರಣಿಕೆ ನೀಡಿ ಗೌರವಿಸದರು. ಯೋಜನೆಯಿಂದ ನೀಡಲಾಗುವ ಸುಜ್ಞಾನ ನಿಧಿ, ಮಾಶಾಸನ, ಯಂತ್ರೋಪಕರಣಗಳ ಅನುದಾನಗಳ ಸಾಂಕೇತಿಕ ವಿತರಣೆಯನ್ನು ಇದೇ ಸಂದರ್ಭದಲ್ಲಿ ಮಾಡಲಾಯಿತು.

ಮಹಮದ್ ರಫೀಕ್ ದರ್ಗಾದ, ಉಪಮಹಾಪೌರ ಲಕ್ಷ್ಮೀ ಉಪ್ಪಾರ, ಮಹೇಶ ಬುರ್ಲಿ, ಕರಿಯಪ್ಪ ಬೀಸಗಲ್, ಮಲ್ಲಿಕಾರ್ಜುನ ಹೊರಕೇರಿ, ಮಲ್ಲಿಕಾರ್ಜುನ ಗುಂಡೂರ, ಶ್ರೀಕಾಂತಕೆಮ್ತೂರ, ಶಿವಶಂಕರಪ್ಪ ಮೂಗಬಸ್ತ್, ಪದ್ಮಪ್ರಿಯಾ ಮೊದಲಾದವರಿದ್ದರು. ಒಕ್ಕೂಟದ ಪದಾಧಿಕಾರಿಗಳು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಗಣ್ಯರು, ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕುಮಾರಿ ಪ್ರಣತಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಸ್ವಾಗತಿಸಿದರು. ಯೋಜನಾಧಿಕಾರಿಗಳಾದ ರೋಹಿತ್‍ಎಚ್. ಗಣಪತಿ ಮಾಳಂಜಿ ನಿರೂಪಿಸಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ ವಂದಿಸಿದರು.


Spread the love

Exit mobile version