Home Mangalorean News Kannada News ಲೋಕಸಭಾ ಚುನಾವಣೆ- ಅನುಮತಿಯಿಲ್ಲದೇ ಜಾಹೀರಾತು ಪ್ರಸಾರಕ್ಕೆ ಅವಕಾಶವಿಲ್ಲ- ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಲೋಕಸಭಾ ಚುನಾವಣೆ- ಅನುಮತಿಯಿಲ್ಲದೇ ಜಾಹೀರಾತು ಪ್ರಸಾರಕ್ಕೆ ಅವಕಾಶವಿಲ್ಲ- ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

Spread the love

ಲೋಕಸಭಾ ಚುನಾವಣೆ- ಅನುಮತಿಯಿಲ್ಲದೇ ಜಾಹೀರಾತು ಪ್ರಸಾರಕ್ಕೆ ಅವಕಾಶವಿಲ್ಲ- ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ : ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಯಾವುದೇ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಕುರಿತಾದ ಜಾಹೀರಾತುಗಳನ್ನು ಸ್ಥಳಿಯ ಕೇಬಲ್ ವಾಹಿನಿಗಳಲ್ಲಿ ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯ ಅನುಮತಿ ಅಗತ್ಯವಿದ್ದು, ಇದನ್ನು ಉಲ್ಲಂಘಿಸುವ ಚಾನೆಲ್ ಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ಥಳಿಯ ಕೇಬಲ್ ವಾಹಿನಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಮಾಡುವ ವೆಚ್ಚವನ್ನು ಪರಿಗಣಿಸಲಾಗುವುದರಿಂದ, ಎಲ್ಲಾ ಕೇಬಲ್ ವಾಹಿನಿಗಳು ಜಿಲ್ಲಾಡಳಿತ ನಿಗಧಿಪಡಿಸಿದ ದರದಲ್ಲಿಯೇ ಚುನಾವಣಾ ಕುರಿತಾದ ಜಾಹೀರಾತುಗಳನ್ನು ಪ್ರಸಾರ ಮಾಡಬೇಕು, ಈ ದರದಲ್ಲಿ ಯಾವುದೇ ವ್ಯತ್ಯಾಸಕ್ಕೆ ಅವಕಾಶವಾಗದಂತೆ ದರ ಪಡೆಯಬೇಕು, ಜಾಹೀರಾತು ಪ್ರಸಾರ ಮಾಡುವ 3 ದಿನಗಳ ಮುಂಚೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಎಂಸಿಎಂಸಿ ಸಮಿತಿ ಪರಿಶೀಲನೆ ನಂತರ ಅನುಮತಿ ಪಡೆದು ಜಾಹೀರಾತು ಪ್ರಸಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಬಲ್ ವಾಹಿನಿಯಲ್ಲಿ ಪ್ರಸಾರವಾಗುವ ಸ್ಕ್ರಾಲಿಂಗ್, ಪ್ಲಾಷ್ ನ್ಯೂಸ್, ರಾಜಕೀಯ ವ್ಯಕ್ತಿಗಳ ಹಾಗೂ ಪಕ್ಷಗಳ ಸಂದರ್ಶನ , ನೇರ ಸಂವಾದ ಕಾರ್ಯಕ್ರಮ, ಮುಖಾಮುಖಿ ಕಾರ್ಯಕ್ರಮ ಮತ್ತು ಅದರ ಮರು ಪ್ರಸಾರ ಕುರಿತಂತೆ ನಿಗಧಿತ ದರ ನಿಗಧಿಪಡಿಸಿದ ಜಿಲ್ಲಾಧಿಕಾರಿ, ಲೈವ್ ಸಂದರ್ಶನ ನಡೆಸುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಅನುಮತಿ ಪಡೆದು ಸಂದರ್ಶನ ನಡೆಸುವಂತೆ ಸೂಚಿಸಿದರು.

ಸ್ಥಳೀಯ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಸ್ಥಳೀಯ ಕೇಬಲ್ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನು 24*7 ವೀಕ್ಷಿಸಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿದ್ದು, ಎಲ್ಲಾ ಕಾರ್ಯಕ್ರಮಗಳ ಸಂಪೂರ್ಣ ರೆಕಾರ್ಡಿಂಗ್ ಸಹ ಆಗುತ್ತಿದ್ದು, ನಿಗಧಿತ ಸಂಖ್ಯೆಯಲ್ಲಿ ಮತ್ತು ಅನುಮತಿ ಪಡೆದ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಬೇಕು,ಇಲ್ಲವಾದಲ್ಲಿ ಇದನ್ನು ಉಲ್ಲಂಘಿಸುವ ಚಾನೆಲ್ ಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಂಸಿಎಂಸಿ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಹಾಗೂ ವಿವಿಧ ಸ್ಥಳಿಯ ವಾಹಿನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


Spread the love

Exit mobile version