26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾಗಿ ಎಸ್ಕೇಪ್ ಆಗಿದ್ದ ಇಬ್ಬರನ್ನು ಕಂಬಿ ಹಿಂದೆ ಕಳುಹಿಸಿದ ಪೊಲೀಸರು
ಮಂಗಳೂರು: ಬರೋಬ್ಬರಿ 26 ವರ್ಷಗಳ ಹಿಂದೆ ನಡೆದ ಕೋಮುಗಲಭೆಯಲ್ಲಿ ಭಾಗಿಯಾಗಿ ಬಳಿಕ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ ಇಬ್ಬರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರನ್ನು ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಎಂದು ಗುರುತಿಸಲಾಗಿದೆ.
ದಿನಾಂಕ 31-12-1998 ರಂದು ಮುಲ್ಕಿ ಠಾಣಾ ಸರಹದ್ದಿನ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ ಸಂದರ್ಭ ಬೆಂಕಿ ಹಚ್ಚಿ ಗಲಾಟೆ ನಡೆಸಿದ ಆರೋಪದ ಮೇಲೆ ಇಬ್ಬರ ವಿರುದ್ದ ಮುಲ್ಕಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ವೇಳೆ ಆರೋಪಿಗಳಾದ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದರು. ಬಳಿಕ ಪೊಲೀಸರು ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಆರೋಪಿ ಲೀಲಾಧರ್ ದುಬೈಗೆ ಪರಾರಿಯಾಗಿದ್ದು. ಇತ್ತೀಚೆಗೆ ಸ್ವದೇಶಕ್ಕೆ ಬಂದು ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾಗ ಮಾಹಿತಿ ಮೇರೆಗೆ ಮುಲ್ಕಿ ಪೊಲೀಸರು ಈ ದಿನ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ನೀಡಿರುತ್ತಾರೆ. ಅದೇ ರೀತಿ ಇತ್ತೀಚೆಗೆ ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಚಂದ್ರಹಾಸ್ ಕೇಶವ ಶೆಟ್ಟಿ (59) ಎಂಬವರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ವಿಶೇಷವೆಂದರೆ ಇಬ್ಬರೂ ತಮ್ಮ ಯೌವ್ವನದಲ್ಲಿ ಈ ಕ್ರೈಂ ಮಾಡಿ ಎಸ್ಕೇಪ್ ಆಗಿದ್ದಾರೆ. ಇದೀಗ ಇಬ್ಬರಿಗೂ 50 ವರ್ಷ ಪ್ರಾಯವಾಗಿದ್ದು, ಇದೀಗ ಜೈಲಿನ ಕಂಬಿ ಏಣಿಸುವ ಹಾಗೆ ಆಗಿದೆ.