Home Mangalorean News Kannada News ಬ್ರಹ್ಮಾವರ: ತಲೆ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಬಾಲಕ ಮೃತ್ಯು

ಬ್ರಹ್ಮಾವರ: ತಲೆ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಬಾಲಕ ಮೃತ್ಯು

Spread the love

ಬ್ರಹ್ಮಾವರ: ತಲೆ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಬಾಲಕ ಮೃತ್ಯು

ಬ್ರಹ್ಮಾವರ: ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರ ಸಮೀಪ ಹೆರಂಜೆಯಲ್ಲಿ ಸಂಭವಿಸಿದೆ.

ಮೃತ ಬಾಲಕನನ್ನು ದಕ್ಷ್ ಪೂಜಾರಿ (1.5) ಎಂದು ಗುರುತಿಸಲಾಗಿದೆ. ಈತ ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರನಾಗಿದ್ದಾನೆ. ದಕ್ಷ್ಗೆ ದಿಯಾ (6) ಎಂಬ ಅಕ್ಕ ಇದ್ದು, ಆಕೆ ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಪ್ರಶಾಂತ್ ಪೂಜಾರಿ ಅವರು ಕಳೆದ ಸುಮಾರು 13 ವರ್ಷಗಳಿಂದ ಬ್ರಹ್ಮಾವರ ಗಾಂಧಿ ಮೈದಾನದ ಸಮೀಪ ಸಣ್ಣ ಗಾಡಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಕುಟುಂಬ ಜೀವನ ಸಾಗಿಸುತ್ತಿದ್ದರು.

ಮಾಹಿತಿಗಳ ಪ್ರಕಾರ ಮಂಗಳವಾರ ಬೆಳಿಗ್ಗೆ ಸುಮಾರು 8.15 ಗಂಟೆಯ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಗಳು ದಿಯಾಳನ್ನು ಶಾಲಾ ಬಸ್ಸಿಗೆ ಕಳುಹಿಸಲು ಸುಚಿತ್ರ ಪೂಜಾರಿ ಅವರು ಮಗ ದಕ್ಷ್ನನ್ನು ಕೈಯಲ್ಲಿ ಎತ್ತಿಕೊಂಡು ಮನೆಯಿಂದ ಹೊರಟಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಕೆಳಗೆ ಬಿದ್ದು ದಕ್ಷ್ನ ತಲೆಗೆ ಬಡಿದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ದರೂ, ತಲೆಯ ಮೆದುಳಿಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.


Spread the love

Exit mobile version