ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ: ರಾಜ್ಯದಲ್ಲಿ 450 ಹೊಸ 108 ಆಂಬ್ಯುಲೆನ್ಸ್ ಸೇರ್ಪಡೆ – ಸಚಿವ ಯು.ಟಿ. ಖಾದರ್
ಮಂಗಳೂರು: ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯ ಇಲಾಖೆ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 200 ಎಂಬಿಬಿಎಸ್ ವೈದ್ಯರು ನೇಮಕಗೊಂಡಿದ್ದು, ಇನ್ನೂ ಸುಮಾರು 3,500 ವಿವಿಧ ಹುದ್ದೆಗಳ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಹೇಳಿದರು.
ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಆಂಬ್ಯುಲೆನ್ಸ್ ಸೇವೆ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅವರ ಅನುಮೋದನೆ ಪಡೆದು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಕರೆ ಬಂದ 20 ನಿಮಿಷಗಳೊಳಗೆ ಹಾಗೂ ನಗರ ಪ್ರದೇಶಗಳಲ್ಲಿ 15 ನಿಮಿಷಗಳೊಳಗೆ ಆಂಬ್ಯುಲೆನ್ಸ್ ತಲುಪುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶೀಘ್ರದಲ್ಲೇ 100 ಬೈಕ್ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗುವುದು. ಅಲ್ಲದೆ, 108 ತುರ್ತು ಸೇವೆಗೆ 450 ಹೊಸ ಆಂಬ್ಯುಲೆನ್ಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಒಟ್ಟು 750 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸಲಿವೆ. ಆಂಬ್ಯುಲೆನ್ಸ್ ಸೇವೆಯಲ್ಲಿ ವಿಳಂಬವಾದರೆ ನಿರ್ವಹಣೆಯ ಹೊಣೆ ಹೊತ್ತಿರುವ ಕಂಪನಿಗೆ ದಂಡ ವಿಧಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲದ ಕಾರಣ, ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕರ್ನಾಟಕ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎಪಿಎಲ್ ಕುಟುಂಬಗಳಿಗೂ ವಿಸ್ತರಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ನಿವೃತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗಾಗಿ ಸಂಧ್ಯಾ ಕಿರಣ ಯೋಜನೆ ರೂಪಿಸಲಾಗಿದ್ದು, ಅವರ ಪಿಂಚಣಿಯಿಂದ ಶೇ.1.25ರಷ್ಟು ಮೊತ್ತವನ್ನು ಪಾವತಿಸುವ ಮೂಲಕ ಯೋಜನೆಯ ಸೌಲಭ್ಯ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವಯೋ ವಂದನಾ ಯೋಜನೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಈ ಕುರಿತು ಮುಖ್ಯಮಂತ್ರಿ ಪ್ರಧಾನಮಂತ್ರಿಗೆ ಪತ್ರ ಬರೆಯಲಿದ್ದು, ತಾವು ಕೇಂದ್ರ ಆರೋಗ್ಯ ಸಚಿವರಿಗೂ ಪತ್ರ ಬರೆದು ರಾಜ್ಯದ ನಿಲುವು ತಿಳಿಸುವುದಾಗಿ ಹೇಳಿದರು. ರಾಜ್ಯ ಸರ್ಕಾರ ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ ಎಂದರು.
ರಾಜ್ಯದ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದೊಂದಿಗೆ ಚಿಕಿತ್ಸಾ ದರಗಳಲ್ಲಿ ಅಗತ್ಯ ಬದಲಾವಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಾದ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಹಾಗೂ ಕಡಬ ತಾಲೂಕುಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ ಸಚಿವರು, ಕೆಲವೆಡೆ ಪರಿಹಾರ ವಿತರಣೆಯಲ್ಲಿ ಗೊಂದಲ ಉಂಟಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಿಸುವುದರ ಜೊತೆಗೆ ಮಾನವೀಯತೆ ಹಾಗೂ ಹೃದಯವಂತಿಕೆಯಿಂದ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
