ಕೊಡವೂರು ಸಂಯುಕ್ತ ವಾರ್ಷಿಕೋತ್ಸವ, ಸನ್ಮಾನ
ಕೊಡವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 152ನೇ, ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ 61ನೇ ಮತ್ತು ದುರ್ಗಾ ಮಹಿಳಾ ಮಂಡಲದ 24 ನೇ ಸಂಯುಕ್ತ ವಾರ್ಷಿಕೋತ್ಸವವು ಜ.16 ರಂದು ಜರುಗಿತು.

ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಗ್ಡೆ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದರು. ಸಾಯಂಕಾಲ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದಯವಾಣಿಯ ವಿಶ್ರಾಂತ ಹಿರಿಯ ಉಪಸಂಪಾದಕ ನಿತ್ಯಾನಂದ ಪಡ್ರೆ ಮಾತನಾಡಿ ಪೋಷಕರು ಮಕ್ಕಳಲ್ಲಿ ಜೀವಂತಿಕೆ, ಲವಲವಿಕೆ ಹಾಗೂ ಬದುಕನ್ನು ಪ್ರೀತಿಸುವಂತೆ ಬೆಳೆಸಬೇಕು.ಏಕಾಗ್ರತೆಯಿಂದ ಅನನ್ಯ ಸಾಧನೆಗೈಯಲು ಸಾಧ್ಯ.ಯಾವುದೇ ಕ್ಷೇತ್ರದಲ್ಲಿ ನಾವು ನೇಪಥ್ಯಕ್ಕೆ ಸರಿದ ಮೇಲೂ ಕೂಡ ಜನರು ನಮ್ಮನ್ನು ಸದಾ ನೆನಪಿಸಿಕೊಳ್ಳುವಂತೆ ಪ್ರಾಮಾಣಿಕವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದರು. ಸಮಾಜ ಸೇವಕ ಜನಾರ್ದನ್ ಉಪ್ಪೂರು, ಶೈಕ್ಷಣಿಕ ಪ್ರತಿಭೆ ನಿಶಾ ಎನ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಲ್ಪಕಾಲದ ಅನಾರೋಗ್ಯದಿಂದ ಇತ್ತೀಚೆಗೆ ಮೃತಪಟ್ಟ ಸ್ಥಳೀಯ ಯುವಕನ ಮನೆಯವರಿಗೆ ಹತ್ತುಸಾವಿರ ಧನಸಹಾಯ ನೀಡಲಾಯಿತು.
ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾದ ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ರವಿರಾಜ್ ಹೆಚ್ ಪಿ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಜ್ಯೋತಿ ಹೆಬ್ಬಾರ್, ಮಾಜಿ ನಗರಸಭಾ ಸದಸ್ಯ ವಿಜಯ ಕೊಡವೂರು ಶುಭ ಹಾರೈಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ, ಶ್ರೀ ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಮೀನಾಕ್ಷಿ ಮಾದವ, ಶಾಲಾ ವಿದ್ಯಾರ್ಥಿ ನಾಯಕ ಸಂಪತ್ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಅವರು ಶಾಲಾ ವರದಿಯನ್ನು ಯುವಕ ಸಂಘದ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ ವರದಿಯನ್ನು ವಾಚಿಸಿದರು.ಯುವಕ ಸಂಘದ ಅಧ್ಯಕ್ಷ ದೀಕ್ಷಿತ್ ದೇವಾಡಿಗ ಸ್ವಾಗತಿಸಿದರು.ಹಳೆವಿದ್ಯಾರ್ಥಿ. ಸಂಘದ ಅಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿ ವಂದಿಸಿದರು.