ಕುಂದಾಪುರ| ಬಾಲಕನ ವಿಡಿಯೋ ವೈರಲ್ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಕುಂದಾಪುರ: ಕಂಡ್ಲೂರಿನಲ್ಲಿ ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ವಿಡಿಯೋ ವೈರಲ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಂಡ್ಲೂರು ಪೇಟೆಯಲ್ಲಿರುವ ಸೆಲೂನ್‌ನಲ್ಲಿ ಫೆ.22ರಂದು ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಹೇಳಿದ ವಿಷಯವನ್ನು ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಸಾರ್ವಜನಿಕವಾಗಿ ಪ್ರಚೋದನೆ ಗೊಳಿಸಿ ಗಲಾಟೆ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಕುಂದಾಪುರ ಗ್ರಾಮಾಂತರ ಪೊಲೀಸರು, ಸೆಲೂನಿನ ಮಾಲಕ ಕಂಡ್ಲೂರು ಜನತಾ ಕಾಲೋನಿ ನಿವಾಸಿ ಶಶಾಂಕ ಭಂಡಾರಿ(30) ಹಾಗೂ ಕಾವ್ರಾಡಿ ಗ್ರಾಮದ ಮರಾಸಿ ಉದ್ದಿನಮಕ್ಕಿಯ ಪ್ರಮೋದ ಡಿಸೋಜ(25) ಎಂಬವರನ್ನು ಬಂಧಿಸಿ, ಕುಂದಾಪುರ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೆಲೂನ್ ಎದುರಗಡೆ ಗುಂಪುಗೂಡಿ, ಬೆದರಿಕೆ ಹಾಕಿರುವ ಬಗ್ಗೆ ಸೆಲೂನ್ ಮಾಲಕ ಶಶಾಂಕ ಭಂಡಾರಿ ನೀಡಿರುವ ಪ್ರತಿದೂರಿನಂತೆಯೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ 20-30 ಜನರನ್ನು ಗುರುತಿಸಲಾಗಿದ್ದು, ಇವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ 25-30 ಜನರನ್ನು ಗುರುತಿಸಲಾಗುತ್ತಿದ್ದು, ಅವರ ವಿರುದ್ಧವೂ ಸಹ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
