ಉಡುಪಿ ಅಬಕಾರಿ ಡಿಸಿ ಮನೆ ಸೇರಿದಂತೆ 15 ಕಡೆ ಲೋಕಾಯುಕ್ತ ದಾಳಿ: ರೂ 8.69 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಉಡುಪಿ: ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆದ ಲೋಕಾಯುಕ್ತ ದಾಳಿಯ ಭಾಗವಾಗಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಮಹತ್ವದ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಮಾರ್ಚ್ 11ರಿಂದ ಮಾರ್ಚ್ 12ರವರೆಗೆ ಎರಡು ದಿನಗಳ ಕಾಲ ಅಧಿಕಾರಿಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಶೋಧದ ವೇಳೆ ಒಟ್ಟು 6,90,64,716 ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಇದರಲ್ಲಿ 11 ನಿವೇಶನಗಳು, 6 ವಾಸದ ಮನೆಗಳು ಹಾಗೂ 31 ಎಕರೆ ಕೃಷಿ ಜಮೀನು ಸೇರಿವೆ.
ಇದಲ್ಲದೆ 3,95,941 ರೂ. ನಗದು, 1,47,50,506 ರೂ. ಮೌಲ್ಯದ ಚಿನ್ನಾಭರಣಗಳು, 17,00,000 ರೂ. ಮೌಲ್ಯದ ವಾಹನಗಳು, 25,75,000 ರೂ. ಮೌಲ್ಯದ ಬ್ಯಾಂಕ್ ಠೇವಣಿಗಳು ಹಾಗೂ 72,68,554 ರೂ. ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿದ್ದು, ಒಟ್ಟು 2,66,90,001 ರೂ. ಮೌಲ್ಯದ ಚರಾಸ್ತಿಯೂ ಪತ್ತೆಯಾಗಿದೆ.
ಈ ಎಲ್ಲಾ ಆಸ್ತಿಗಳನ್ನು ಸೇರಿಸಿ ಒಟ್ಟು ಸುಮಾರು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಈ ಬಗ್ಗೆ ಉಡುಪಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ