12 ಗಂಟೆಯಲ್ಲಿ ಮನೆಗಳ್ಳತನ ಭೇದಿಸಿದ ಮಣಿಪಾಲ ಪೊಲೀಸರು : ನಾಲ್ವರು ವಶಕ್ಕೆ
ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಗಲು ಮನೆ ಕಳ್ಳತನ ಪ್ರಕರಣವನ್ನು ಕೇವಲ 12 ಗಂಟೆಯೊಳಗೆ ಭೇದಿಸಿ ಇಬ್ಬರು ಆರೋಪಿಗಳು ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ವಶಕ್ಕೆ ಪಡೆಯುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ರೂ.4,47,000 ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ಹನುಮಂತ ನಗರ ನಿವಾಸಿ ಸಂತೋಷ @ ಸಂತೋಷ ಪೊರೆಷಿ (20), ಕಲ್ಮಾಡಿ ನಿವಾಸಿ ಚಿರಂತನ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರು ಬಂಧಿತರು
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಶಾಂತಿನಗರ ನಿವಾಸಿ ಸಂಗೀತ ಮಡಿವಾಳ ಅವರು ಮಾರ್ಚ್ 12, 2026 ರಂದು ಬೆಳಗ್ಗೆ 8 ಗಂಟೆಗೆ ಮನೆಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು. ಮಧ್ಯಾಹ್ನ 2 ಗಂಟೆಗೆ ಮನೆಗೆ ಮರಳಿ ಬಂದಾಗ ಮನೆಯ ಹಂಚು ತೆಗೆದು ಒಳ ಪ್ರವೇಶಿಸಿ ಕಪಾಟಿನಲ್ಲಿ ಇದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳರು ಕಳವು ಮಾಡಿರುವುದು ಪತ್ತೆಯಾಯಿತು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಪತ್ತೆಹಚ್ಚುವ ಸಲುವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಐಪಿಎಸ್ ಅವರ ಆದೇಶದಂತೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿದ್ದು, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ತಿಮ್ಮೇಶ್ ಬಿ.ಎನ್ ಹಾಗೂ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ವಿಶ್ವಜಿತ್ ಬೆಳ್ಳಿ, ಮಹಮ್ಮದ್ ಅಜ್ಜಲ್ ಹೈಕಾಡಿ, ಚೇತನ್ ಮತ್ತು ರವಿರಾಜ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮಾರ್ಚ್ 13, 2026 ರಂದು ಶಿವಳ್ಳಿ ಗ್ರಾಮದ ಶಿಂಬ್ರಾ ಬ್ರಿಡ್ಜ್ ಸಮೀಪ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಇಬ್ಬರು ಬಾಲಕರನ್ನು ವಿಚಾರಣೆ ನಡೆಸಿದಾಗ, ಅವರು 80 ಬಡಗುಬೆಟ್ಟು ಗ್ರಾಮದ ಶಾಂತಿನಗರದಲ್ಲಿರುವ ಬೀಗ ಹಾಕಿದ ಮನೆಗೆ ಹಂಚು ತೆಗೆದು ಒಳ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರಿಂದ ಕೃತ್ಯಕ್ಕೆ ಬಳಸಿದ ಸಾಮಗ್ರಿ ಹಾಗೂ ರೂ.4,47,000 ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ಎಸ್. ನಾಯಕ್ ಅವರ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ ಅವರ ನಿರ್ದೇಶನದಂತೆ ನಡೆಯಿತು.
ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಪಿ.ಎಸ್.ಐ ತಿಮ್ಮೇಶ್ ಬಿ.ಎನ್, ಹೆಡ್ ಕಾನ್ಸ್ಟೇಬಲ್ ವಿಶ್ವಜಿತ್ ಬೆಳ್ಳಿ, ಮಹಮ್ಮದ್ ಅಜ್ಜಲ್ ಹೈಕಾಡಿ, ಚೇತನ್, ಪಿಸಿ ರವಿರಾಜ್, ಠಾಣಾ ತನಿಖಾ ಸಹಾಯಕರು ಹೆಚ್ಸಿ ಸುರೇಶ್ ಶೆಟ್ಟಿ ಮತ್ತು ಸುಕುಮಾರ್ ಶೆಟ್ಟಿ, ಜೀಪು ಚಾಲಕರು ಸಲೀಂ ಮತ್ತು ಸತೀಶ್, ಉಡುಪಿ ಸಿಡಿಆರ್ ವಿಭಾಗದ ದಿನೇಶ್ ಹಾಗೂ ನಿತಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
