ಪೋಪ್ ಲಿಯೋ ಅವರ ವಿರುದ್ಧ ಟ್ರಂಪ್ ಹೇಳಿಕೆಗೆ ಮಂಗಳೂರು ಧರ್ಮಪ್ರಾಂತ್ಯ ಖಂಡನೆ
ಮಂಗಳೂರು: ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರೈಸ್ತ ಜಗದ್ಗುರು ಪರಮಪೂಜ್ಯ ಪೋಪ್ 14ನೇ ಲಿಯೋ ಅವರ ವಿರುದ್ಧ ಇತ್ತೀಚೆಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮಂಗಳೂರು ಧರ್ಮಪ್ರಾಂತ್ಯವು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಧರ್ಮಪ್ರಾಂತ್ಯ, ಪೋಪ್ ಅವರ ವಿರುದ್ಧದ ಇಂತಹ ಹೇಳಿಕೆಗಳು ಮಂಗಳೂರು, ಭಾರತ ಮತ್ತು ವಿಶ್ವದಾದ್ಯಂತದ ಕ್ಯಾಥೋಲಿಕ್ ಸಮುದಾಯದ ಭಾವನೆಗಳಿಗೆ ಗಂಭೀರವಾಗಿ ಧಕ್ಕೆಯುಂಟುಮಾಡಿವೆ ಎಂದು ತಿಳಿಸಿದೆ. ಪೋಪ್ ಅವರನ್ನು ಸಂತ ಪೇತ್ರರ ಉತ್ತರಾಧಿಕಾರಿ ಹಾಗೂ ಕ್ರೈಸ್ತ ಧರ್ಮಸಭೆಯ ಮುಖ್ಯಸ್ಥರಾಗಿ ಗೌರವಿಸುವ ನಂಬಿಕಸ್ಥರ ಮನಸ್ಸಿಗೆ ಈ ಹೇಳಿಕೆಗಳು ನೋವುಂಟುಮಾಡಿವೆ ಎಂದು ಹೇಳಿದೆ.
ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ ಅಗತ್ಯವಾದರೂ, ಧಾರ್ಮಿಕ ಮುಖಂಡರ ಮೇಲೆ ವೈಯಕ್ತಿಕ ದಾಳಿಗಳು ನಾಗರಿಕ ಸಂವಾದದಲ್ಲಿ ಸ್ಥಾನ ಪಡೆಯಬಾರದು. ಇಂತಹ ಹೇಳಿಕೆಗಳು ಪರಸ್ಪರ ಗೌರವವನ್ನು ಕುಂದಿಸುವುದರ ಜೊತೆಗೆ ಅಂತರಧರ್ಮೀಯ ಸಾಮರಸ್ಯಕ್ಕೂ ಧಕ್ಕೆಯುಂಟುಮಾಡುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕ ಶಿಸ್ತನ್ನು ಕಾಪಾಡಿಕೊಂಡು, ಇತರರ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಹೇಳಿಕೆಗಳಿಂದ ದೂರವಿರಬೇಕು ಎಂದು ಧರ್ಮಪ್ರಾಂತ್ಯ ಒತ್ತಾಯಿಸಿದೆ.
ಇದೇ ವೇಳೆ, ಪೋಪ್ 14ನೇ ಲಿಯೋ ಅವರ ತಮ್ಮ ಅಚಲ ನಿಷ್ಠೆ ಮತ್ತು ವಿಧೇಯತೆಯನ್ನು ಮಂಗಳೂರು ಧರ್ಮಪ್ರಾಂತ್ಯ ಪುನರುಚ್ಚರಿಸಿದ್ದು, ಶಾಂತಿ, ನ್ಯಾಯ ಮತ್ತು ಬಡವರ ಸೇವೆಯಲ್ಲಿ ಅವರ ನಾಯಕತ್ವ ಜಗತ್ತಿಗೆ ದಾರಿ ತೋರಲಿ ಎಂದು ಪ್ರಾರ್ಥಿಸಿದೆ.
ಇಂತಹ ಸಂದರ್ಭಗಳಲ್ಲಿ ಪೋಪ್ ಸೇರಿದಂತೆ ಎಲ್ಲಾ ಪ್ರಭಾವಿ ವ್ಯಕ್ತಿಗಳು ಸತ್ಯ ಮತ್ತು ಪರಸ್ಪರ ಗೌರವದ ಮಾರ್ಗದಲ್ಲಿ ನಡೆಯಲೆಂದು ಪ್ರಾರ್ಥಿಸಲು ಕ್ರೈಸ್ತ ವಿಶ್ವಾಸಿಗಳಿಗೆ ಧರ್ಮಪ್ರಾಂತ್ಯ ಮನವಿ ಮಾಡಿದೆ.
ಈ ಪ್ರಕಟಣೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ವಂ. ಡಾ. ಜೆ. ಬಿ. ಸಲ್ಡಾನ್ಹಾ ಮತ್ತು ರೊಯ್ ಕ್ಯಾಸ್ತೆಲಿನೊ ಪ್ರಕಟಿಸಿದ್ದಾರೆ.
