ಮಂಗಳೂರು | ಆಹಾರ ಸುರಕ್ಷತಾ ಅಧಿಕಾರಿಗಳಿಂದ ಬಂದರಿನ ಮಂಜುಗಡ್ಡೆ ತಯಾರಿಕಾ ಘಟಕಗಳ ಪರಿಶೀಲನೆ
ಮಂಗಳೂರು: ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಆದೇಶದ ಮೇರೆಗೆ ದ.ಕ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡವು ಮಂಗಳೂರು ಬಂದರ್ ದಕ್ಕೆಯಲ್ಲಿರುವ ಹಸಿ ಮೀನು ಸಂರಕ್ಷಿಸಿಡಲು ಬಳಸಲಾಗುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಈ ಘಟಕಗಳಲ್ಲಿ ನೀರಿನ ಟ್ಯಾಂಕರ್ಗಳ ಮೂಲಕ ಸಿಹಿ ನೀರನ್ನು ಖರೀದಿಸಿ ಮಂಜುಗಡ್ಡೆಯನ್ನು ತಯಾರಿಸಲಾಗುತ್ತಿದೆ. ಮಂಜುಗಡ್ಡೆಯ ಮಾದರಿಯನ್ನು ಸಂಗ್ರಹಿಹಿಸಿದ ತಂಡವು ಮಂಜುಗುಡ್ಡೆ ತಯಾರಿಸಲು ಬಳಸಲಾಗುವ ನೀರಿನ ಪ್ರಯೋಗಾಲಯ ವರದಿಗಳನ್ನು ಪಡೆದ ಬಳಿಕವೇ ಮಂಜುಗಡ್ಡೆಯನ್ನು ತಯಾರಿಸಲು ಸೂಚಿಸಲಾಯಿತು.
ಮಂಗಳೂರು ಟ್ರಾಲ್ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಮಂಜುಗಡ್ಡೆ ತಯಾರಿಕಾ ಘಟಕ ನಡೆಸಲಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಶುದ್ಧ ಮಂಜುಗಡ್ಡೆಯನ್ನು ತಯಾರಿಸುವುದು ಕಂಡು ಬಂದಿರುತ್ತದೆ. ಮಂಜುಗಡ್ಡೆ ತಯಾರಿಸಲು ಬಳಸಲಾಗುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತಮ ಗುಣಮಟ್ಟದ ಶುಚಿಯಾದ ತಾಜಾ ಮೀನುಗಳ ಸಂರಕ್ಷಣೆಗೆ ಉತ್ತಮ ಗುಣಮಟ್ಟದ ನೀರನ್ನು ಬಳಸಿ ತಯಾರಿಸಿದ ಮಂಜುಗಡ್ಡೆಯನ್ನು ಬಳಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ ಅಧಿಕಾರಿಗಳು, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿತು. ಅಲ್ಲದೆ ಮೀನಿನ ಸಂರಕ್ಷಣೆಗೆ ಫಾರ್ಮಲಿನ್ ಅಥವಾ ಇನ್ಯಾವುದೇ ರಾಸಾಯನಿಕ ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
