ಪಂಚಾಯತ್ ರಾಜ್ ತಜ್ಙ, ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ನಿಧನ
ಕುಂದಾಪುರ: ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ, ರಾಷ್ಟ್ರೀಯ ಮಟ್ಟದ ಪಂಚಾಯತ್ ರಾಜ್ ತಜ್ಙ ಜನಾರ್ದನ ಮರವಂತೆ (88) ಅಲ್ಪಕಾಲದ ಅಸೌಖ್ಯದಿಂದಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಇಂಗ್ಲೀಷ್ ಭಾಷಾ ಉಪನ್ಯಾಸಕರಾಗಿದ್ದ ಅವರು, ಬೈಂದೂರು, ನಾವುಂದ, ಹೆಮ್ಮಾಡಿ ಮುಂತಾದ ಕಡೆಗಳಲ್ಲಿ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಹವ್ಯಾಸಿ ಅಂಕಣ ಬರಹಗಾರರಾಗಿದ್ದ ಅವರು ಹಲವು ವರ್ಷಗಳ ಕಾಲ ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಿಗೆ ವರದಿಗಾರಾಗಿ ಸೇವೆ ಸಲ್ಲಿಸಿದ್ದರು.
ಸಾಹಿತ್ಯ, ಶಿಕ್ಷಣ, ಪಂಚಾಯತ್ ರಾಜ್ ವಿಷಯಗಳ ಬಗ್ಗೆ ಆಳ ಜ್ಙಾನವನ್ನು ಹೊಂದಿದ್ದ ಅವರು, ವಿವಿಧ ವೇದಿಕೆಗಳಲ್ಲಿ ತಮ್ಮ ಅನುಭವವನ್ನು ಪ್ರಸ್ತುತಪಡಿಸಿದ್ದರು. ತಾಲೂಕು ಕಾನೂನು ನೆರವು ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮರವಂತೆ ಗ್ರಾ.ಪಂ ಸದಸ್ಯ ಹಾಗೂ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಅವರ ಸೇವಾವಧಿಯಲ್ಲಿ ಗ್ರಾ.ಪಂ ಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮನ್ನಣೆಗಳು ಬಂದಿತ್ತು. ಪಂಚಾಯತ್ ರಾಜ್ ವಿಚಾರದಲ್ಲಿ ಅವರಿಗಿದ್ದ ಆಳವಾದ ಜ್ಙಾನ ಹಾಗೂ ಅಗಾಧ ಅನುಭವದ ಕಾರಣದಿಂದ ಕುಂದಾಪುರ ತಾಲೂಕು ಪಂಚಾಯತ್ ಮೈಸೂರು ಪಂಚಾಯತ್ ರಾಜ್ ತರಬೇತಿ ಕೇಂದ್ರದ ತರಬೇತುದಾರರಾಗಿ ನಿಯೋಜನೆಗೊಂಡಿದ್ದರು. ರಾಜ್ಯ ಮತ್ತು ರಾಷ್ಟ್ರೀಯ ಪಂಚಾಯತ್ ರಾಜ್ ಸಲಹಾ ಮಂಡಳಿಯ ಸದಸ್ಯರಾಗಿದ್ದ ಅವರು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಲವು ಪಂಚಾಯತ್ ರಾಜ್ ಸಮ್ಮೇಳನ, ವಿಚಾರಗೋಷ್ಠಿ, ಕಥೆ ಹಾಗೂ ಕಲಾಪಗಳಲ್ಲಿ ಭಾಗವಹಿಸಿದ್ದರು. ಅವಿಭಜಿತ ಕುಂದಾಪುರ ತಾಲೂಕು ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ರಾಜ್ ಒಕ್ಕೂಟ ಸಂಘಟನೆಯ ಸ್ಥಾಪನೆಗೆ ಪ್ರಮುಖರಾಗಿದ್ದ ಅವರು, ಅಧ್ಯಕ್ಷರಾಗಿಯೂ ತಮ್ಮ ಹೊಣೆಗಾರಿಕೆ ನೆರವೇರಿಸಿದ್ದರು.
ಮರವಂತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ತ್ರಾಸಿ-ಮರವಂತೆ ಕಡಲಕಿನಾರೆ ಉಳಿಸಿ ಆಂದೋಲನ, ತ್ರಿಸ್ಥರ ಪಂಚಾಯತ್ ವ್ಯವಸ್ಥೆಯ ಹಕ್ಕುಗಳಿಗಾಗಿ ನಡೆದ ಹೋರಾಟಗಳ ನೇತೃತ್ವ ವಹಿಸಿದ್ದರು. ಸಾಧನಾ ಮರವಂತೆ ಎನ್ನುವ ಸಾಮಾಜಿಕ ಕಳಕಳಿಯುಳ್ಳ ಸಂಸ್ಥೆಯನ್ನು ಕಟ್ಟಿ ಮಾದರಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾಗಿದ್ದ ಅವರು, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ನಾಡ ರಾಬರ್ಟ್ ಝೆಡ್ ಎಂ ಡಿಸೋಜ ಐಟಿಐ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅಂತಿಮ ದರ್ಶನ: ಮೃತರ ಅಂತಿಮ ದರ್ಶನ ಜೂನ್ 7 ರ ಆದಿತ್ಯವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಮರವಂತೆಯ ಸಾಧನಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
