ಮಧ್ಯ ಪ್ರಾಚ್ಯದಲ್ಲಿ ಶಾಂತಿಗಾಗಿ ಉಡುಪಿ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8ರಂದು ವಿಶೇಷ ಪ್ರಾರ್ಥನೆಗೆ ಕರೆ
- ಮಾರ್ಚ್ 8ರಿಂದ 14ರವರೆಗೆ ಜಪಸರ ಪ್ರಾರ್ಥನೆ, ಮಾ.13ರಂದು ಉಪವಾಸ-ಪ್ರಾರ್ಥನೆಗೆ ಕರೆ
ಉಡುಪಿ: ಮಧ್ಯಪ್ರಾಚ್ಯ ಪ್ರದೇಶದಲ್ಲಿ, ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ಎಂದು ಕರೆ ನೀಡಲಾಗಿದ್ದು ಅದರಂತೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8 ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಕ್ರೈಸ್ತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ಮಾನವೀಯ ದುಃಖವು ವಿಶ್ವಮಾನವ ಕುಟುಂಬಕ್ಕೆ ಆಳವಾದ ಗಾಯವನ್ನುಂಟುಮಾಡುತ್ತಿದೆ. ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ವಾಸಿಸುತ್ತಿರುವ ಭಾರತದ ಸಹೋದರ-ಸಹೋದರಿಯರ ಸುರಕ್ಷತೆ ಕುರಿತು ಕ್ರೈಸ್ತ ಧರ್ಮಸಭೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದು, ದೂರದೇಶದಲ್ಲಿ ದುಡಿದು ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವ ಅವರು ಧರ್ಮಸಭೆ ಮತ್ತು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಈ ಅನಿಶ್ಚಿತ ಸಮಯದಲ್ಲಿ ಅವರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕಾಗಿ ದೇವರ ಕೃಪೆಗೆ ಒಪ್ಪಿಸುವಂತೆ ಮನವಿ ಮಾಡಲಾಗಿದೆ.
ಈ ಸಂಕಷ್ಟದ ಘಟ್ಟವನ್ನು ದೇವರ ಕರುಣೆಗೆ ಅರ್ಪಿಸಬೇಕೆಂದು ಕರೆ ನೀಡಲಾಗಿದ್ದು, 2026ರ ಮಾರ್ಚ್ 8ರಂದು ಭಾನುವಾರವನ್ನು “ಶಾಂತಿಗಾಗಿ ಪ್ರಾರ್ಥನಾ ದಿನ”ವಾಗಿ ಆಚರಿಸಲು ಸೂಚಿಸಲಾಗಿದೆ. ಆ ದಿನ ವಿಶೇಷವಾಗಿ ಪವಿತ್ರ ಬಲಪೂಜೆಯ ಆಚರಣೆಯ ವೇಳೆ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲು ಮನವಿ ಮಾಡಲಾಗಿದೆ. ಹಿಂಸಾಚಾರ ನಿಲ್ಲಲೆಂದು, ನಿರಪರಾಧಿಗಳ ರಕ್ಷಣೆಯಾಗಲೆಂದು ಹಾಗೂ ಜಗತ್ತಿನ ನಾಯಕರು ಜ್ಞಾನ ಮತ್ತು ಸಂಯಮದಿಂದ ನಡೆದುಕೊಳ್ಳಲೆಂದು ಭಕ್ತರ ಪ್ರಾರ್ಥನೆಗಳಲ್ಲಿ ವಿಶೇಷ ಉದ್ದೇಶಗಳನ್ನು ಸೇರಿಸಬಹುದು ಎಂದು ತಿಳಿಸಲಾಗಿದೆ.
ಇದೇ ವೇಳೆ, ಮಾರ್ಚ್ 8ರಿಂದ 14ರವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷವಾಗಿ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ ಮನವಿ ಮಾಡಲಾಗಿದೆ. ಮಾರ್ಚ್ 13ರಂದು ಶುಕ್ರವಾರ ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಿ, ವಿಶ್ವಶಾಂತಿ ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಎಲ್ಲರ ಸುರಕ್ಷತೆಗೆ ತ್ಯಾಗ ಸಮರ್ಪಿಸಲು ಕೋರಲಾಗಿದ್ದು ಸಾಮೂಹಿಕ ಪ್ರಾರ್ಥನೆ, ತಪಸ್ಸು ಮತ್ತು ಏಕತೆ ಮೂಲಕ ಸರ್ವಶಕ್ತ ದೇವರ ಮುಂದೆ ವಿನಮ್ರವಾದ ಮನವಿ ಸಲ್ಲಿಸಿ, ದ್ವೇಷದ ಮನೋಭಾವಗಳು ದೂರವಾಗಿ, ಹಿಂಸಾಚಾರ ನಿಂತು, ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಆಶಿಸಲಾಗಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
