ಮುಡಾ ಮಹಾ ಯೋಜನೆ ಕರಡು ಪ್ರತಿಗೆ ಅನುಮೋದನೆ ಕುರಿತು ಚರ್ಚೆ
- ಕರಾವಳಿ ರಸ್ತೆ, ಅಂಡರ್ಪಾಸ್, ಸ್ಮಾರ್ಟ್ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ
ಮಂಗಳೂರು: ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಹಾಗೂ ಹಣಕಾಸು ಸಲಹೆಗಾರ ಎಲ್.ಕೆ. ಅತೀಕ್ ಅವರ ಉಪಸ್ಥಿತಿಯಲ್ಲಿ ಮುಡಾ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮುಡಾ ಮಹಾ ಯೋಜನೆಯ ಕರಡು ಪ್ರತಿಗೆ ಸರ್ಕಾರದಿಂದ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಸಲಾಯಿತು. ಮಂಗಳೂರು ಐ ಯೋಜನೆಗಾಗಿ ಕದ್ರಿ ಪಾರ್ಕ್ ಎದುರು 5 ಎಕರೆ ಜಾಗವನ್ನು ಮೀಸಲಿಡಲಾಗಿದ್ದು, ಯೋಜನೆಯ ಅನುಷ್ಠಾನದ ಕುರಿತು ಎಲ್.ಕೆ. ಅತೀಕ್ ಅವರು ಮಾಹಿತಿ ಪಡೆದುಕೊಂಡರು.

ಬಟ್ಟಪ್ಪಾಡಿಯಿಂದ ಸಸಿಹಿತ್ಲುವರೆಗೆ ಕೋಸ್ಟಲ್ ರಸ್ತೆ ಅಭಿವೃದ್ಧಿ, ಸಿಆರ್ಝಡ್ ಸಮಸ್ಯೆಗಳು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ನಗರದ ವಿವಿಧೆಡೆ ಅಂಡರ್ಪಾಸ್ ನಿರ್ಮಾಣ ಹಾಗೂ ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದವರೆಗೆ ಸ್ಮಾರ್ಟ್ ರಸ್ತೆ ನಿರ್ಮಿಸುವ ಕುರಿತೂ ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪಂಚಾಯತ್ ಸಿಇಒ ವಿನಾಯಕ ಕಾರ್ಬಾರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್, ಮುಡಾ ಆಯುಕ್ತ ಅಬ್ದುಲ್ ನಜೀರ್, ಆರ್ಕಿಟೆಕ್ಟ್ ಸುಪ್ರಿತ್ ಆಳ್ವ ಸೇರಿದಂತೆ ಕ್ರೆಡಾಯ್, ಪ್ರವಾಸೋದ್ಯಮ, ಕೆಯುಐಡಿಎಫ್ಸಿ, ಸಿಆರ್ಝಡ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.












