ಮಂಗಳೂರು: ಸಭಾಭವನದ ಆಧಾರ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ

Spread the love

ಮಂಗಳೂರು: ಸಭಾಭವನದ ಆಧಾರ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ

ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್ ಸಮೀಪದ ರಾಮ ಲಕ್ಷ್ಮೀ ಹಾಲ್‌ನಲ್ಲಿ ಆಧಾರ ಗೋಡೆ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸೆಪ್ಟೆಂಬರ್ 26ರ ಶನಿವಾರ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಭಾಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಅತಿಯಾದ ಜನದಟ್ಟಣೆಯಿಂದಾಗಿ ಕಾರಿಡಾರ್‌ನಲ್ಲಿ ನಿಂತಿದ್ದ ಕೆಲ ವಿದ್ಯಾರ್ಥಿಗಳು ಆಧಾರ ಗೋಡೆಗೆ ಒರಗಿ ನಿಂತಿದ್ದರು ಎನ್ನಲಾಗಿದೆ.

ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ಹಲವು ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಪೈಕಿ ಓರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ತಲೆಗೆ ತೀವ್ರ ಗಾಯವಾಗಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಮೊಹಮ್ಮದ್ ಶಮಾಝ್ (16), ಮೊಹಮ್ಮದ್ ಶನಾನ್ ಅಹ್ಮದ್ (18), ಹನೀಫ್ (23), ದಾವೂದ್ ಫಾರ್ಸಿನ್ ಅಹ್ಮದ್ (18) ಹಾಗೂ ಮೊಹಮ್ಮದ್ ಶಕೀಲ್ ಹುಸೈನ್ (18) ಎಂದು ಗುರುತಿಸಲಾಗಿದೆ.

ಐವರಿಗೂ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಗೋಡೆ ಕುಸಿತಕ್ಕೆ ಕಾರಣವಾದ ಪರಿಸ್ಥಿತಿ ಹಾಗೂ ಗಾಯಾಳುಗಳ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.


Spread the love
Subscribe
Notify of

0 Comments