ಡಿಜಿಟಲ್ ಭಾರತದ ಆಶಯಕ್ಕೆ ಹಿನ್ನಡೆ: ಪದ್ಮರಾಜ್ ಆರ್. ಪೂಜಾರಿ

Spread the love

ಡಿಜಿಟಲ್ ಭಾರತದ ಆಶಯಕ್ಕೆ ಹಿನ್ನಡೆ: ಪದ್ಮರಾಜ್ ಆರ್. ಪೂಜಾರಿ

ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ವಿರುದ್ಧವಾದ ಹಾಗೂ ದೇಶದ ಡಿಜಿಟಲ್ ಆರ್ಥಿಕತೆಯ ಪ್ರಗತಿಗೆ ಹಿನ್ನಡೆಯಾಗುವ ಕ್ರಮವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.

ಆರಂಭದಲ್ಲಿ ‘ಉಚಿತ ಮತ್ತು ಸರಳ’ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ದೇಶದ ಜನರನ್ನು ಡಿಜಿಟಲ್ ವಹಿವಾಟಿನತ್ತ ಕೊಂಡೊಯ್ದ ಬಳಿಕ ಇದೀಗ ಜನಸಾಮಾನ್ಯರ ಡಿಜಿಟಲ್ ಪಾವತಿ ಅಭ್ಯಾಸವನ್ನೇ ಶುಲ್ಕ ವಿಧಿಸುವ ಮೂಲಕ ಬದಲಾಯಿಸಲು ಮುಂದಾಗಿರುವುದು ಸರ್ಕಾರದ ನೀತಿಯಲ್ಲಿನ ವಿರೋಧಾಭಾಸವನ್ನು ತೋರಿಸುತ್ತದೆ.

ಯುಪಿಐ ಮೇಲಿನ ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ಪಡೆಯದೆ ವ್ಯಾಪಾರಿಗಳ ಮೇಲೆ MDR ರೂಪದಲ್ಲಿ ವಿಧಿಸಲಾಗುತ್ತದೆ ಎಂಬ ವಾದದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವ್ಯಾಪಾರಿಗಳ ಮೇಲಿನ ಹೆಚ್ಚುವರಿ ವೆಚ್ಚವು ಅಂತಿಮವಾಗಿ ದಿನಸಿ, ಇಂಧನ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಗಳ ಮೂಲಕ ಗ್ರಾಹಕರ ಮೇಲೆಯೇ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಇಂತಹ ಶುಲ್ಕ ಮತ್ತು ತೆರಿಗೆ ಸಂಬಂಧಿತ ನಿಯಮಗಳು ಸಣ್ಣ ವ್ಯಾಪಾರಿಗಳಲ್ಲಿ ಗೊಂದಲ ಹಾಗೂ ಅನಿಶ್ಚಿತತೆಯನ್ನು ಉಂಟುಮಾಡಿ ಅವರು ಮತ್ತೆ ನಗದು ವಹಿವಾಟಿಗೆ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಜನರು ಹಾಗೂ ಸಣ್ಣ ವ್ಯಾಪಾರಿಗಳು ಡಿಜಿಟಲ್ ಪಾವತಿಗಳ ಬದಲಿಗೆ ನಗದಿನತ್ತ ಮರಳುವಂತಾದರೆ ಪಾರದರ್ಶಕ ವಹಿವಾಟು ವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ.

ದೇಶವನ್ನು ಡಿಜಿಟಲ್ ಆರ್ಥಿಕತೆಯತ್ತ ಕೊಂಡೊಯ್ಯುವ ಸಂದರ್ಭದಲ್ಲಿ ಯುಪಿಐನಂತಹ ಸರಳ, ವೇಗದ ಮತ್ತು ವ್ಯಾಪಕವಾಗಿ ಬಳಕೆಯಾಗುತ್ತಿರುವ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬದಲು, ಅದರ ಮೇಲೆ ಹೆಚ್ಚುವರಿ ವೆಚ್ಚದ ಹೊರೆ ಹೇರುವುದು ಸೂಕ್ತ ಕ್ರಮವಲ್ಲ.

ಜನಸಾಮಾನ್ಯರು ಮತ್ತು ಸಣ್ಣ ವ್ಯಾಪಾರಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಯುಪಿಐ ವಹಿವಾಟಿನ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು. ಡಿಜಿಟಲ್ ಇಂಡಿಯಾವನ್ನು ಬಲಪಡಿಸುವ ನೀತಿಗಳ ಬದಲಿಗೆ ಡಿಜಿಟಲ್ ವಹಿವಾಟಿಗೆ ಹೊರೆ ಹೇರುವ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಪದ್ಮರಾಜ್ ಆರ್. ಪೂಜಾರಿ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments