ತೊಟ್ಟಂ ಗಣೇಶೋತ್ಸವದಲ್ಲಿ ಸೌಹಾರ್ದತೆಯ ಸಂದೇಶ: ಚರ್ಚ್ ಪ್ರತಿನಿಧಿಗಳಿಂದ ಪರಸ್ಪರ ಶುಭಾಶಯ ವಿನಿಮಯ
ಮಲ್ಪೆ: ಕೋಮು ಸೌಹಾರ್ದತೆ, ಪರಸ್ಪರ ಗೌರವ ಹಾಗೂ ಸ್ನೇಹದ ಸಂದೇಶ ಸಾರುವ ನಿಟ್ಟಿನಲ್ಲಿ ತೊಟ್ಟಂನ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ವಂ. ಫಾ. ಹೆನ್ರಿ ಮಸ್ಕರೇನ್ಹಸ್ ಹಾಗೂ ಉಡುಪಿ ವಲಯದ ಪ್ರಧಾನ ಧರ್ಮಗುರು, ಶೋಕಮಾತಾ ಚರ್ಚಿನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಹಾಗೂ ಕ್ರೈಸ್ತ ಬಾಂಧವರು ತೊಟ್ಟಂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ತೊಟ್ಟಂನಲ್ಲಿ ಗಣೇಶೋತ್ಸವ ಆಚರಣೆಗೆ 50 ವರ್ಷಗಳು ಪೂರ್ಣಗೊಂಡಿದ್ದು, ಸಮಿತಿ ಈ ಬಾರಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷ ಮಹತ್ವ ಪಡೆದುಕೊಂಡಿತು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆ. ಸಾಲ್ಯಾನ್ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಚರ್ಚ್ನ ಪ್ರತಿನಿಧಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು ಹಾಗೂ ಗಣ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು.


ಎರಡೂ ಸಮುದಾಯಗಳ ಪ್ರತಿನಿಧಿಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಗಣೇಶೋತ್ಸವದ ಸುವರ್ಣ ಮಹೋತ್ಸವದ ಆಚರಣೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ವಿವಿಧ ಧರ್ಮಗಳ ಜನರು ಪರಸ್ಪರ ಗೌರವ, ಸ್ನೇಹ ಮತ್ತು ಸಹೋದರತ್ವದಿಂದ ಬದುಕುತ್ತಿರುವ ತೊಟ್ಟಂನ ಸೌಹಾರ್ದ ಪರಂಪರೆಗೆ ಈ ಭೇಟಿ ಮತ್ತೊಂದು ಉತ್ತಮ ಉದಾಹರಣೆಯಾಯಿತು. ಹಲವು ವರ್ಷಗಳಿಂದ ಸ್ಥಳೀಯವಾಗಿ ಬೆಳೆದು ಬಂದಿರುವ ಪರಸ್ಪರ ಬಾಂಧವ್ಯ ಹಾಗೂ ಒಗ್ಗಟ್ಟನ್ನು ಈ ಸಂದರ್ಭದಲ್ಲಿ ಪ್ರತಿನಿಧಿಗಳು ಸ್ಮರಿಸಿದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ವಿವಿಧ ಧರ್ಮಗಳ ನಡುವಿನ ಉತ್ತಮ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಈ ಭೇಟಿ ಸಾರಿತು. ತೊಟ್ಟಂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಆಚರಣೆ ಯಶಸ್ವಿಯಾಗಲಿ ಹಾಗೂ ಮುಂದಿನ ದಿನಗಳಲ್ಲಿಯೂ ಪ್ರದೇಶದಲ್ಲಿ ಏಕತೆ, ಸಹೋದರತ್ವ ಮತ್ತು ಪರಸ್ಪರ ಗೌರವದ ಮನೋಭಾವ ಮತ್ತಷ್ಟು ಗಟ್ಟಿಯಾಗಲಿ ಎಂದು ಎರಡೂ ಸಮುದಾಯಗಳ ಪ್ರತಿನಿಧಿಗಳು ಹಾರೈಸಿದರು.

ತೊಟ್ಟಂ ಚರ್ಚಿನ ಪಾಲನಾ ಪರಿಷತ್ ನ ಉಪಾಧ್ಯಕ್ಷರಾದ ಲೆಸ್ಲಿ ಆರೋಜಾ, ಪಾಲನಾ ಪರಿಷತ್ ನ ಸದಸ್ಯರು, ಹಾಗೂ ತೊಟ್ಟಂ ಸಂತ ಅನ್ನಮ್ಮ ಕಾನ್ವೆಂಟಿನ ಧರ್ಮಭಗಿನಿಯರು ಈ ಸಂದರ್ಭದಲ್ಲಿ ಧರ್ಮಗುರುಗಳೊಂದಿಗೆ ಉಪಸ್ಥಿತರಿದ್ದರು.












