ಉಡುಪಿಯಲ್ಲಿ ಕ್ರೈಸ್ತ ಧರ್ಮಗುರುಗಳ ಕ್ರಿಕೆಟ್ ಪಂದ್ಯಾಟ; ವಿಯಾನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್

Spread the love

ಉಡುಪಿಯಲ್ಲಿ ಕ್ರೈಸ್ತ ಧರ್ಮಗುರುಗಳ ಕ್ರಿಕೆಟ್ ಪಂದ್ಯಾಟ; ವಿಯಾನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್

ಉಡುಪಿ: ಪ್ರತಿದಿನ ಪವಿತ್ರ ಬಲಿಪೀಠದ ಬಳಿ ಧಾರ್ಮಿಕ ಸೇವೆಯಲ್ಲಿ ತೊಡಗಿಕೊಳ್ಳುವ ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು ಭಾನುವಾರ ಪವಿತ್ರ ಬಲಿಪೂಜೆಯ ಬಳಿಕ ಕ್ರಿಕೆಟ್ ಬ್ಯಾಟ್ ಹಿಡಿದ ಮೈದಾನಕ್ಕಿಳಿದು ವಿಯಾನ್ನಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಡಿದ ಅಪರೂಪದ ಘಟನೆ ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಜರುಗಿತು.

ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಪೂರ್ಣ ಬೆಂಬಲ ಹಾಗೂ ಸಹಕಾರದೊಂದಿಗೆ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು. ವಿಯಾನಿ ಟೈಟನ್ಸ್, ವಿಯಾನಿ ಚಾಲೆಂಜರ್ಸ್, ವಿಯಾನಿ ಕ್ಯಾಪಿಟಲ್ಸ್, ವಿಯಾನಿ ವಾರಿಯರ್ಸ್ ಹಾಗೂ ವಿಯಾನಿ ಸೂಪರ್ ಕಿಂಗ್ಸ್ ತಂಡಗಳು ನಾಕೌಟ್ ಮಾದರಿಯಲ್ಲಿ ಸೆಣಸಾಡಿದವು. ಒಟ್ಟು ಸುಮಾರು 60 ಮಂದಿ ಧರ್ಮಗುರುಗಳು, ಡಿಕನ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ನಾಲ್ಕು ಓವರ್ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಯಾನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಯಾನಿ ಕ್ಯಾಪಿಟಲ್ಸ್ ತಂಡ ರನ್ನರ್ಅಪ್ ಸ್ಥಾನ ಪಡೆಯಿತು.

ಪಾಂಬೂರು ಚರ್ಚಿನ ಡೀಕನ್ ಸ್ಟೀಫನ್ ಡಿಸೋಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಕಟಪಾಡಿಯ ಹೋಲಿ ಕ್ರಾಸ್ ಸೆಮಿನರಿಯ ಫಾ. ಜೋಜೋ ಅವರು ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.

ಟೂರ್ನಮೆಂಟ್ ನಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳೊಂದಿಗೆ ವಿವಿಧ ಧಾರ್ಮಿಕ ಸಭೆಗಳಾದ ಹೋಲಿ ಕ್ರಾಸ್, ಕಾರ್ಮೆಲೈಟ್ಸ್ ಪ್ರಿಸ್ಟ್, ಸಾಲೇಶಿಯನ್ ಡಾನ್ ಬಾಸ್ಕೊ, ಕಾಪುಚಿನ್ ಸಭೆಯ ಧರ್ಮಗುರುಗಳು ಸಹ ಸೇರಿದ್ದರು.

ಕ್ರಿಕೆಟ್ ಪಂದ್ಯಾಟಕ್ಕೆ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್ ಲೂವಿಸ್ ಚಾಲನೆ ನೀಡಿ ಶುಭ ಹಾರೈಸಿದರು.

ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟೀಫನ್ ಡಿಸೋಜಾ, ನಿವೃತ್ತ ಧರ್ಮಗುರು ವಂ|ಆಲ್ಫೋನ್ಸ್ ಡಿಲೀಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್ ಸೇರಿದಂತೆ ಧರ್ಮಪ್ರಾಂತ್ಯದ ವಿವಿಧ ಚರ್ಚುಗಳ ಧರ್ಮಗುರುಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments